
ಸಂಚಾರ ದಟ್ಟಣೆ
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದ ಹೊರ ವರ್ತುಲ ರಸ್ತೆ (ಒಆರ್‌ಆರ್), ಸರ್ಜಾಪುರ ರಸ್ತೆ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿವಾರಣೆ ಸಂಬಂಧ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಶುಕ್ರವಾರ ಅಧಿಕಾರಿಗಳು, ಒಆರ್‌ಆರ್‌ಸಿಎ ಪ್ರತಿನಿಧಿಗಳು, ಡಬ್ಲ್ಯುಆರ್‌ಐ ಇಂಡಿಯಾ ತಂಡ, ಟೆಕ್ ಪಾರ್ಕ್‌ಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು.
ಹೊರ ವರ್ತುಲ ರಸ್ತೆ ಪ್ರದೇಶದ ರಸ್ತೆಗಳ ಸುಧಾರಣೆ, ಪಾದಚಾರಿಗಳಿಗೆ ಅನುಕೂಲ, ರಸ್ತೆ ಜಾಲದ ವಿಸ್ತರಣೆ, ಬಸ್ ಸೇವೆ ಬಲಪಡಿಸುವ ಕುರಿತು ಚರ್ಚಿಸಲಾಯಿತು. ಪೂರ್ವ ನಗರ ಪಾಲಿಕೆಯ ಪ್ರದೇಶದ ಗಿಯರ್ ಶಾಲೆ ರಸ್ತೆ, ಮದರ್‌ಹುಡ್ ರಸ್ತೆ ಸೇರಿದಂತೆ ಎಲ್ಲ ಸಂಪರ್ಕ ರಸ್ತೆಗಳಲ್ಲಿ ಗುಂಡಿ ಮುಚ್ಚಲು ತಕ್ಷಣೆ ಕ್ರಮಗೊಳ್ಳಲಾಗುವುದು. ಒತ್ತುವರಿ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಪೂರ್ವ ನಗರ ಪಾಲಿಕೆಯು ಇಬ್ಲೂರು ಜಂಕ್ಷನ್ ನಲ್ಲಿ ಸುರಕ್ಷಾ 75 ಅಡಿಯಲ್ಲಿ ಕಾಮಗಾರಿ ವೇಗಗೊಳಿಸಲಿದ್ದು, ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್ ವಿಸ್ತರಿಸಲಾಗುತ್ತದೆ. ದಕ್ಷಿಣ ನಗರ ಪಾಲಿಕೆಯು ಹರಳೂರು ರಸ್ತೆ, ಕೈಕೊಂಡ್ರಹಳ್ಳಿ ರಸ್ತೆ, ಹೊಸ ರಸ್ತೆಗಳನ್ನು ಗುಂಡಿಗಳಿಲ್ಲದ ರಸ್ತೆಗಳನ್ನಾಗಿ ಮಾಡಲಾಗುವುದು. ಬಸ್ ನಿಲ್ದಾಣಗಳನ್ನು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಅತಿಕ್ರಮಣಗಳನ್ನು ಮುಕ್ತಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಎಂಟಿಸಿ ಫೀಡರ್ ಬಸ್ ಅನ್ನು ಕೆ.ಆರ್. ಪುರ ಮೆಟ್ರೊ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಮೆಟ್ರೊ ನಿಲ್ದಾಣದವರೆಗೆ ವಿಸ್ತರಿಸುವುದು, ಒಆರ್‌ಆರ್ ಪ್ರದೇಶದಲ್ಲಿ ಹೆಚ್ಚುವರಿ ಬಸ್ ಸೇವೆ ನೀಡಲು ಬಿಎಂಟಿಸಿಗೆ ಪ್ರಸ್ತಾವನೆ ಸಲ್ಲಿಸುವುದು, ಬಿಎಂಟಿಸಿ ಆದ್ಯತಾ ಮಾರ್ಗಕ್ಕಾಗಿ ಅಧ್ಯಯನ ನಡೆಸುವುದು, ಸರ್ಜಾಪುರ ರಸ್ತೆಯ ಸಮಗ್ರ ಅಭಿವೃದ್ಧಿ, ಎರಡೂ ಬದಿಯ ದ್ವಿತೀಯ ರಸ್ತೆ ಜಾಲ, ಜಂಕ್ಷನ್‌ಗಳ ಸುಧಾರಣೆ ಹಾಗೂ ಕ್ಯಾರೇಜ್‌ವೇ ಸರಳೀಕರಣ ಕಾರ್ಯ ಕೈಗೊಳ್ಳುವುದು ಮುಂತಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ರಮೇಶ್ ಡಿ.ಎಸ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ವಿವಿಧ ಅಧಿಕಾರಿಗಳು, ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.