ADVERTISEMENT

ರಾಯಚೂರು: 7,672 ಬಿಪಿಎಲ್‌ ಕಾರ್ಡ್‌ದಾರರಿಗೆ ಶಾಕ್‌

ಅಂತರ ರಾಜ್ಯಗಳ ಪಡಿತರ ಚೀಟಿಯಲ್ಲಿ ಹೆಸರಿರುವ ಸದಸ್ಯರು 3,131

ಚಂದ್ರಕಾಂತ ಮಸಾನಿ
Published 4 ನವೆಂಬರ್ 2025, 7:43 IST
Last Updated 4 ನವೆಂಬರ್ 2025, 7:43 IST
ಸರ್ಕಾರದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳುತ್ತಿರುವ ಫಲಾನುಭವಿಗಳು / ಸಂಗ್ರಹ ಚಿತ್ರ
ಸರ್ಕಾರದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳುತ್ತಿರುವ ಫಲಾನುಭವಿಗಳು / ಸಂಗ್ರಹ ಚಿತ್ರ   

ರಾಯಚೂರು: ಜಿಲ್ಲೆಯಲ್ಲಿ 7,672 ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುವ ಮೂಲಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆದಾಯ ತೆರಿಗೆ ಪಾವತಿಸುವವರು ಹಾಗೂ ಹತ್ತಾರು ಎಕರೆ ಜಮೀನು ಹೊಂದಿದವರಿಗೆ ಶಾಕ್‌ ನೀಡಿದೆ.

ಕೇಂದ್ರ ಸರ್ಕಾರದ ಮಾನದಂಡಗಳು ಮತ್ತು ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ ದತ್ತಾಂಶದ ಮೂಲಕ 7,672 ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ.

ದೇವದುರ್ಗ ಹಾಗೂ ಸಿಂಧನೂರು ತಾಲ್ಲೂಕಿನ ತಲಾ ಮೂವರು ಹಾಗೂ ಲಿಂಗಸುಗೂರು ತಾಲ್ಲೂಕಿನ ಇಬ್ಬರು ಕಾರು ಇಟ್ಟುಕೊಂಡಿದ್ದರು. ಏಳೂವರೆ ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದ ಮಾನ್ವಿಯ 935, ಲಿಂಗಸುಗೂರಿನ 613, ರಾಯಚೂರಿನ 618, ಸಿಂಧನೂರಿನ 454 ಹಾಗೂ ದೇವದುರ್ಗದ 305 ಮಂದಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವುದನ್ನು ಪತ್ತೆ ಮಾಡಲಾಗಿದೆ.

ADVERTISEMENT

ನೆರೆಯ ರಾಜ್ಯಗಳಲ್ಲೂ ಬಿಪಿಎಲ್‌ ಪಡಿತರ ಚೀಟಿಗಳಲ್ಲಿ ಹೆಸರು ಹೊಂದಿರುವ 3,131 ಸದಸ್ಯರನ್ನು ಪತ್ತೆ ಮಾಡಲಾಗಿದೆ. ರಾಯಚೂರು ಹಾಗೂ ಬೇರೆ ಜಿಲ್ಲೆಗಳಲ್ಲೂ ಪಡಿತರ ಚೀಟಿ ಹೊಂದಿರುವ 23 ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ.

ಕಾರ್ಪೋರೇಟ್‌ ಕಂಪನಿಗಳ ನಿರ್ದೇಶಕರಾಗಿರುವ 405 ಮಂದಿ ಮತ್ತು ₹25 ಲಕ್ಷಕ್ಕಿಂತ ಹೆಚ್ಚು ವ್ಯವಹಾರ ನಡೆಸುತ್ತಿರುವ 62 ಜನರ ಹೆಸರು ಬಿಪಿಎಲ್‌ ಕಾರ್ಡ್‌ನಲ್ಲಿದೆ. ₹ 1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದ ಬಿಪಿಎಲ್‌ ಕಾರ್ಡ್‌ನಲ್ಲಿರುವ 10,639 ಸದಸ್ಯರನ್ನು ಪತ್ತೆ ಮಾಡಲಾಗಿದೆ.

ರಾಯಚೂರಿನ ಮಡ್ಡಿಪೇಟೆಯಲ್ಲಿರುವ ನ್ಯಾಯಬೆಲೆ ಅಂಗಡಿ

ಕಾರ್ಡ್‌ ಪೂರ್ತಿ ರದ್ದಾಗಿಲ್ಲ

ಮೃತಪಟ್ಟವರ ಹೆಸರು ಡಿಲೀಟ್​​ ಮಾಡದೇ ಇರುವವರ ₹25 ಲಕ್ಷ ಮೇಲಿನ ಜಿಎಸ್​ಟಿ ವ್ಯವಹಾರ ನಡೆಸಿದ ₹1.20 ಲಕ್ಷಕಿಂತ ಹೆಚ್ಚಿನ ಆದಾಯ ಹೊಂದಿರುವ 7.5 ಎಕರೆಗೂ ಹೆಚ್ಚಿನ ಜಮೀನು ಹೊಂದಿರುವ ಇ-ಕೆವೈಸಿ ಮಾಡಿಸದ ಹಾಗೂ ಕಳೆದ ಆರು ತಿಂಗಳಿಂದ ಪಡಿತರ ಪಡೆಯದವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. 2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾನದಂಡಗಳ ಪ್ರಕಾರ ಸರ್ಕಾರಿ ನೌಕರರಾಗಿರಬಾರದು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ಭೂಮಿ ಹೊಂದಿರಬಾರದು. ನಾಲ್ಕು ಚಕ್ರದ ವಾಹನ ಇರಬಾರದು. ಕುಟುಂಬದ ವಾರ್ಷಿಕ ಆದಾಯ ₹ 1.20 ಲಕ್ಷ ರೂಪಾಯಿ ಮೀರಬಾರದು ಎನ್ನುವ ಅಂಶಗಳ ಆಧಾರದ ಮೇಲೆ ಪಡಿತರ ಚೀಟಿ ರದ್ದುಪಡಿಸಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ತಪ್ಪಾಗಿ ಎಪಿಎಲ್‌ಗೆ ವರ್ಗಾವಣೆಯಾಗಿದ್ದರೆ ಜಿಲ್ಲಾ ಕೇಂದ್ರದಲ್ಲಿ ಆಹಾರ ಇಲಾಖೆಯ ಕಚೇರಿ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಕಚೇರಿಗೆ ಹೋಗಿ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿ ನಿಮ್ಮ ಬಿಪಿಎಲ್ ಕಾರ್ಡ್ ಅನ್ನು ಮರುಸ್ಥಾಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ‘ಬಡತನ ರೇಖೆಗಿಂತ ಕೆಳಗಿರುವ ಅರ್ಹರ ಪಡಿತರ ಚೀಟಿ ರದ್ದಾಗಿದ್ದರೆ ಆಧಾರ್ ವಿಳಾಸದ ಪುರಾವೆ ಸಹಿತ ಮನವಿಯನ್ನು ಒಂದು ತಿಂಗಳ ಒಳಗೆ ಸಲ್ಲಿಸಬಹುದಾಗಿದೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ನಜೀರ್‌ ಅಹಮ್ಮದ್‌ ಹೇಳುತ್ತಾರೆ.

ಆಧಾರ್‌ ಕಾರ್ಡ್‌ ಮೂಲಕವೇ ನೆರೆ ರಾಜ್ಯಗಳಲ್ಲೂ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದವರನ್ನು ಹಾಗೂ ತೆರಿಗೆ ಪಾವತಿದಾರರ ಬಳಿ ಇರುವ ಕಾರ್ಡ್ ಪತ್ತೆ ಮಾಡಲಾಗಿದೆ.
–ನಜೀರ್‌ ಅಹಮ್ಮದ್‌, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.