ADVERTISEMENT

ಬೀದರ್ | ನನೆಗುದಿಗೆ ಬಿದ್ದ ನೀರಾವರಿಗೆ ಬೇಕಿದೆ ಅನುದಾನ

ಘೋಷಿತ ಯೋಜನೆಗಳು ಆಗಬೇಕಿದೆ ವೈಜ್ಞಾನಿಕ ಅನುಷ್ಠಾನ

ನಾಗರಾಜ ಚಿನಗುಂಡಿ
Published 3 ಫೆಬ್ರುವರಿ 2022, 19:30 IST
Last Updated 3 ಫೆಬ್ರುವರಿ 2022, 19:30 IST
ಚಾಮರಸ ಮಾಲಿಪಾಟೀಲ
ಚಾಮರಸ ಮಾಲಿಪಾಟೀಲ   

ರಾಯಚೂರು: ಜಿಲ್ಲೆಯಲ್ಲಿ ಪ್ರತಿವರ್ಷ ಪ್ರವಾಹದ ಆತಂಕ ಸೃಷ್ಟಿಸುವ ಕೃಷ್ಣಾ, ತುಂಗಭದ್ರಾ ಎರಡೂ ನದಿಗಳಿದ್ದರೂ ಎಲ್ಲ ಕಡೆಗೂ ಸಮರ್ಪಕ ನೀರಾವರಿ ಒದಗಿಸುವುದಕ್ಕೆ ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರವು ಈ ವರ್ಷ ಮಂಡಿಸುವ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಯ ನೀರಾವರಿಗೆ ಆದ್ಯತೆ ಕೊಡಬಹುದು ಎನ್ನುವ ನಿರೀಕ್ಷೆ ರೈತರದ್ದು.

ಒಟ್ಟು ಕೃಷಿ ಭೂಮಿಯಲ್ಲಿ ಅರ್ಧದಷ್ಟು ಈಗಲೂ ಮಳೆಯಾಶ್ರಿತವಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಹಾಗೂ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಕಾಲುವೆಗಳ ನಿರ್ಮಾಣದ ಮೂಲ ಉದ್ದೇಶವೇ ಇನ್ನೂ ಈಡೇರಿಲ್ಲ. ಕಾಲುವೆ ಕೊನೆಭಾಗದ ರೈತರು ಪ್ರತಿವರ್ಷ ಹೋರಾಟ ಮಾಡುವ ಸಮಸ್ಯೆ ಹಾಗೇ ಮುಂದುವರಿದಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ತುಂಗಭದ್ರಾ ಜಲಾಶಯಕ್ಕೆ ಸಮನಾಂತರ ಜಲಾಶಯವನ್ನು ತ್ವರಿತವಾಗಿ ನಿರ್ಮಿಸುವ ಅಗತ್ಯವಿದೆ.

ರಾಯಚೂರು ತಾಲ್ಲೂಕಿನಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗಾಗಿ ₹198 ಕೋಟಿ ಅನುದಾನ ಒದಗಿಸಲಾಗಿದೆ. ಆದರೂ ಸಿಂಗನೋಡಿ ಹಾಗೂ ಮಂಡಲಗೇರಾ ಕೆರೆಗಳನ್ನು ನಿರ್ಲಕ್ಷಿಸಲಾಗಿದ್ದು, ತೆಲಂಗಾಣ ರಾಜ್ಯದ ಗಡಿಭಾಗದ ಈ ಕೆರೆಗಳನ್ನು ತುಂಬಿಸುವ ಯೋಜನೆ ಮಾಡಬೇಕು ಎನ್ನುವುದು ರೈತರ ಬೇಡಿಕೆ.

ADVERTISEMENT

ಮಾನ್ವಿ ತಾಲ್ಲೂಕಿನ ಯಡಿವಾಳ ಏತ ನೀರಾವರಿ ನನೆಗುದಿಗೆ ಬಿದ್ದಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ₹80 ಕೋಟಿಗೆ ಅಂದಾಜು ಮಾಡಲಾಗಿತ್ತು. ಇದರಿಂದ 10 ಸಾವಿರ ಎಕರೆ ಭೂಮಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ. ಇದುವರೆಗೂ ಟೆಂಡರ್‌ ಪ್ರಕ್ರಿಯೆ ನಡೆದಿರುವುದಿಲ್ಲ.

ಮಾನ್ವಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೇರ ಸಂಪರ್ಕ ಕಲ್ಪಿಸುವ ನೀರಾವರಿ ಯೋಜನೆಯ ಬೇಡಿಕೆಯೂ ಇದೆ.

ಲಿಂಗಸುಗೂರು ತಾಲ್ಲೂಕು ಮಾಚನೂರು ಕೆರೆ ಆಧುನೀಕರಣ ಮಾಡಿ, ಕುಡಿಯುವ ನೀರಿಗೆ ಬಳಕೆ ಮಾಡಲು ಉದ್ದೇಶಿಸಲಾಗಿತ್ತು. ಹಲವು ವರ್ಷಗಳಿಂದ ಯೋಜನೆ ಹಾಗೇ ಉಳಿದಿದೆ. ಜಲದುರ್ಗ, ಅಂಕನಾಳ, ಕಡದರಗಡ್ಡಿ, ಗುಂತಗೋಳ, ವ್ಯಾಕರನಾಳ ಏತ ನೀರಾವರಿ ಯೋಜನೆಗಳು ಘೋಷಣೆಯಾಗಿದ್ದಲ್ಲದೆ, ಗುತ್ತಿಗೆ ಕೂಡಾ ವಹಿಸಲಾಗಿತ್ತು. ಆದರೆ, ಕಾಮಗಾರಿಗಳು ಮಾತ್ರ ಇನ್ನೂ ಮುಗಿದಿಲ್ಲ. ಈ ಬಗ್ಗೆ ಸರ್ಕಾರದಿಂದ ಏನಾದರೂ ಕ್ರಮ ಘೋಷಿಸಬಹುದು ಎನ್ನುವ ಬೇಡಿಕೆ ಇದೆ.

ಕೃಷ್ಣಾನದಿಯಿಂದ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ನಿರ್ಮಾಣ ಮಾಡುವಾಗ 5ಎ ಉಪಕಾಲುವೆಗೂ ಯೋಜನೆ ರೂಪಿಸಲಾಗಿತ್ತು. 2007 ರಿಂದ ಇದುವರೆಗೂ ಉಪಕಾಲುವೆ ನಿರ್ಮಾಣವಾಗಿಲ್ಲ. ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳ ರೈತರು ಇಂದಿಗೂ ಉಪಕಾಲುವೆಗಾಗಿ ಹೋರಾಟ ಮುಂದುವರಿಸಿದ್ದಾರೆ. ಮಸ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಇದೇ ಬೇಡಿಕೆ ಪ್ರಮುಖವಾಗಿ ಗಮನ ಸೆಳೆಯುತ್ತಾ ಬರುತ್ತಿದೆ. ಈ ಬಜೆಟ್‌ನಲ್ಲಿ ಏನಾದರೂ ಅನುದಾನ ಘೋಷಿಸಬಹುದು ಎನ್ನುವ ಆಕಾಂಕ್ಷೆ ಇದೆ.

ಬಂಗಾರಪ್ಪ ಕೆರೆಯಿಂದ ಸಿರವಾರಕ್ಕೆ ನೀರು ಒದಗಿಸಲು ಪೈಪ್‌ಲೈನ್‌ ಮಾಡುವ ಪ್ರಸ್ತಾವನೆ ಇದೆ. ಇನ್ನೂ ಅನುಷ್ಠಾನ ಹಂತಕ್ಕೆ ಬಂದಿಲ್ಲ. ತಾಲ್ಲೂಕು ಕೇಂದ್ರವಾಗಿರುವ ಸಿರವಾರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಮೂಲವೇ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.