ADVERTISEMENT

ಮನುವಾದಿಗಳಿಂದ ಸಂವಿಧಾನ ಮೂಲೆಗುಂಪು ಮಾಡುವ ಸಂಚು: ಸಾಹಿತಿ ಕುಂ. ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:33 IST
Last Updated 22 ಡಿಸೆಂಬರ್ 2025, 7:33 IST
ರಾಯಚೂರಿನ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ರಾ‌ಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿದರು
ರಾಯಚೂರಿನ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ರಾ‌ಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿದರು   

ರಾಯಚೂರು: ‘ದೇಶದ ಸಂವಿಧಾನವನ್ನು ಮೂಲೆಗುಂಪು ಮಾಡುವ ಹಾಗೂ ದೇಶದ ಸಂಪನ್ಮೂಲವನ್ನೇ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವ ವ್ಯವಸ್ಥಿತ ಸಂಚು ನಡೆದಿದೆ. ತಳ ಸಮುದಾಯದವರು ಜಾಗೃತರಾಗದಿದ್ದರೆ ಮತ್ತೆ ಕಸ ಬಳಿಯಬೇಕಾಗುತ್ತದೆ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಎಚ್ಚರಿಸಿದರು.

ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಭಾನುವಾರ ಇಲ್ಲಿಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಭಾನುವಾರ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ರಾ‌ಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇವತ್ತಿನ ಸಂದರ್ಭದಲ್ಲಿ ಸಂವಿಧಾನ ಹಾಗೂ ನೆಹರು ಅವರ ಮೇಲೆ ವಾಗ್ದಾಳಿಗಳು ನಡೆಯುತ್ತಿವೆ. ಅಂಬೇಡ್ಕರ್‌ ಅವರನ್ನೂ ನೇಪತ್ಯಕ್ಕೆ ಸರಿಸುತ್ತಿದ್ದಾರೆ. ಗಾಂಧೀಜಿ ಅವರನ್ನು ಕೇಳುವ ಹಾಗೆಯೇ ಇಲ್ಲ. ನರೇಗಾ ತೆಗೆದು ಜಿರಾಮಜಿ ಮಾಡುತ್ತಿದ್ದಾರೆ. ರಾಷ್ಟ್ರದ ಮುಖ್ಯ ಖಾತೆಗಳನ್ನು ಹಾಗೂ ಸಂಪತ್ತನ್ನು ಖಾಸಗಿಯವರಿಗೆ ವಹಿಸುತ್ತಿದ್ದಾರೆ. ಅಣು ವಿದ್ಯುತ್‌ನ್ನೂ ಖಾಸಗಿಯವರಿಗೆ ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ದೇಶವನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡುವ ವ್ಯವಸ್ಥಿತ ಸಂಚು ನಡೆದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಮನುವಾದಿಗಳು ಅಸ್ತಿತ್ವಕ್ಕೆ ಬಂದರೆ ಶೋಷಿತ ವರ್ಗದವರು ಸಾಮಾಜಿಕವಾಗಿ ಮೇಲಕ್ಕೆ ಬರಲು ಸಾಧ್ಯವಿಲ್ಲ. ಹಿಂದೆ ಕೋಲಾರದ ದಲಿತರ ಮೇಲೆ ಹಲ್ಲೆ ನಡೆದಾಗ ರಾಜ್ಯದ ಪ್ರಗತಿಪರರೆಲ್ಲರೂ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದರು. ಇಂದು ಅನೇಕ ಲೇಖಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಯುತ್ತಿದೆ. ಮಹಿಳೆಯರ ಮಾನ ಭಂಗ ಆಗುತ್ತಿದೆ. ದಲಿತ ಸಚಿವರು ದೇವಸ್ಥಾನದ ಕಾರ್ಯಕ್ರಮದಲ್ಲಿ ಕುರ್ಚಿ ಮೇಲೆ ಕುಳಿತು ಬಂದರೆ ಕುರ್ಚಿಯನ್ನು ಶುಚಿಗೊಳಿಸುವ ಕೆಲಸ ನಡೆದಿದೆ. ಇದು ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ’ ಎಂದು ಹೇಳಿದರು.

‘ದೇಶದಲ್ಲಿ ಇಂದು ಉಸಿರಿಗಟ್ಟುವ ವಾತಾವರಣ ಇದೆ. ವ್ಯವಸ್ಥೆ ಸರಿಪಡಿಸದಿದ್ದರೆ 10 ವರ್ಷದಲ್ಲಿ ಸಂವಿಧಾನ ನಮ್ಮ ಕೈಯಲ್ಲಿ ಇರುವುದಿಲ್ಲ. ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಪ್ರಶಸ್ತಿಗಳಿಗೆ ಅರ್ಥವೇ ಇರುವುದಿಲ್ಲ’ ಎಂದರು.

ಸಣ್ಣ ನೀರವಾರಿ, ಮಾಹಿತಿ ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಮಾತನಾಡಿ, ‘ಇಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಮೂಲಕ ಈ ಭಾಗದ ಸಾಹಿತಿಗಳು ಹಾಗೂ ಸಾಧಕರಿಗೆ ಗೌರವ ಲಭಿಸಿದೆ‘ ಎಂದು ಹೇಳಿದರು.

ಅತಿಥಿಗಳಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಕೃಷಿ ವಿಜ್ಞಾನಗಳ ಕೃಷಿ ವಿಶ್ವವಿದ್ಯಾಲಯ ಕುಲಪತಿ ಹನುಮಂತಪ್ಪ ಆಗಮಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷೆ ಜಯದೇವಿ ಗಾಯಕವಾಡ, ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ಉಪಸ್ಥಿತರಿದ್ದರು.

ಹುರುಗಲವಾಡಿ ರಾಮಯ್ಯ ನರಸಿಂಹಮೂರ್ತಿ ಹಾಗೂ ತಂಡದವರು ಅಂಬೇಡ್ಕರ್ ಗೀತೆಗಳನ್ನು ಹಾಡಿದರು. ಎಂ.ಬಿ.ಕಟ್ಟಿಮನಿ, ಕೆ.ಸಿ.ಸೋಮಲತ ನಿರೂಪಿಸಿದರು. ತಿಮ್ಮಣ್ಣ ಕಲ್ಮಂಗಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.