ADVERTISEMENT

ರಾಯಚೂರು: ಅತ್ತೆ, ಪತ್ನಿ, ನಾದಿನಿ ಕೊಲೆ ಮಾಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 7:56 IST
Last Updated 2 ಅಕ್ಟೋಬರ್ 2021, 7:56 IST
ಆರೋಪಿ ಸಾಯಿ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸಾಯಿ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.    

ರಾಯಚೂರು: ನಗರ ವ್ಯಾಪ್ತಿಯ ಯರಮರಸ್ ಕ್ಯಾಂಪ್‌ನಲ್ಲಿ ಮೂರು ದಿನಗಳ ‌ಹಿಂದೆ ಅತ್ತೆ, ಪತ್ನಿ ಹಾಗೂ ನಾದಿನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹೈದಾರಾಬಾದ್ ಮೂಲದ ಆರೋಪಿ ಅಳಿಯ ಸಾಯಿ ಕುಮಾರ್‌ನನ್ನು ರಾಯಚೂರು ಪೊಲೀಸರು ಶುಕ್ರವಾರ ಬಂಧಿಸಿ ಕರೆತಂದಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಆರೋಪಿ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟರ್ ಕೂಡಾ ಆಗಿದ್ದಾನೆ. ಕೊಲೆಯಾದ ವೈಷ್ಣವಿಯೊಂದಿಗೆ ಆರು ತಿಂಗಳುಗಳ ಹಿಂದೆ ಆರೋಪಿ ಮದುವೆಯಾಗಿತ್ತು. ಕಳೆದ ಎರಡು ತಿಂಗಳುಗಳಿಂದ ಪತ್ನಿಯು ತವರು ಮನೆಯಿಂದ ವಾಪಸಾಗಿರಲಿಲ್ಲ. ಅಕ್ಟೋಬರ್ 29 ರಂದು ತನ್ನ ಇಬ್ಬರು ಸ್ನೇಹಿತರೊಂದಿಗೆ ಆರೋಪಿ ಯರಮರಸ್ ಕ್ಯಾಂಂಪ್ ಅತ್ತೆ ಮನೆಗೆ ಬಂದಿದ್ದ. ಜಗಳವು ವಿಕೋಪಕ್ಕೆ ತಿರುಗಿ ನಡುರಾತ್ರಿಯೇ ಮೂವರನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು ಎಂದು ತಿಳಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಪತ್ತೆಗಾಗಿ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಮುಖ್ಯ ಆರೋಪಿಯನ್ನು ಹೈದರಾಬಾದ್ ನಲ್ಲೇ ಬಂಧಿಸಿ ಕರೆತಂದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇನ್ನಿಬ್ಬರು ಆರೋಪಿಗಳಿಗೆ ಶೋಧ ಮುಂದುವರಿಸಲಾಗಿದೆ ಎಂದರು.

ತನಿಖೆ ಬಳಿಕ ಮತ್ತಷ್ಟು ವಿಷಯಗಳು ಗೊತ್ತಾಗಲಿವೆ. ಕೊಲೆಗೆ ಕೌಟುಂಬಿಕ ಕಲಹವೇ ಕರಣ ಎಂಬುದು ಸದ್ಯಕ್ಕೆ ಗೊತ್ತಾಗಿದೆ ಎಂದು ಹೇಳಿದರು.

ಹಿನ್ನೆಲೆ: ಯರಮರಸ್ ಕ್ಯಾಂಪ್‌ನಲ್ಲಿ ವಾಸವಿದ್ದ ಅತ್ತೆ ಸಂತೋಷಿ, ಪತ್ನಿ ವೈಷ್ಣವಿ ಹಾಗೂ ನಾದಿನಿ ಆರತಿ ಮೂವರಿಗೂ ಚಾಕುವಿನಿಂದ ತಿವಿದು ಕೊಲೆ ಮಾಡಿರುವುದು ಅಕ್ಟೋಬರ್ 30 ರಂದು ಬೆಳಕಿಗೆ ಬಂದು ಸಂಚಲನ ಸೃಷ್ಟಿಸಿತ್ತು.‌ ಎರಡೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.