ADVERTISEMENT

ದೇವದುರ್ಗ | ಕೆಕೆಆರ್‌ಟಿಸಿ ಬಸ್ ಅಪಘಾತ: ನಿರ್ವಾಹಕ ಸಾವು, 22 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 6:44 IST
Last Updated 10 ಡಿಸೆಂಬರ್ 2025, 6:44 IST
ದೇವದುರ್ಗ ತಾಲ್ಲೂಕಿನ ಅಂಚೆಸೂಗೂರು- ಅಂಜಳ ರಸ್ತೆ ಬಳಿ ಉರುಳಿದ ಬಸ್
ದೇವದುರ್ಗ ತಾಲ್ಲೂಕಿನ ಅಂಚೆಸೂಗೂರು- ಅಂಜಳ ರಸ್ತೆ ಬಳಿ ಉರುಳಿದ ಬಸ್   

ದೇವದುರ್ಗ: ತಾಲ್ಲೂಕಿನ ಅಂಚೆಸೂಗೂರು - ಅಂಜಳ ಗ್ರಾಮಕ್ಕೆ ಮಂಗಳವಾರ ಬೆಳಿಗ್ಗೆ ತೆರಳಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ವಾಪಸ್ ಬರುವಾಗ ಬಸ್ ಪಟ್ಟಿ ಮುರಿದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಘಟನೆಯಲ್ಲಿ ಬಸ್‌ ನಿರ್ವಾಹಕ ಮೃತಪಟ್ಟಿದ್ದು,  22 ಜನರು ಗಾಯಗೊಂಡಿದ್ದಾರೆ.

ದೇವದುರ್ಗ ಪಟ್ಟಣಕ್ಕೆ ಶಾಲೆಗೆ ತೆರಳುತ್ತಿದ್ದ ಬಸ್‌ನಲ್ಲಿದ್ದ 19 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಗಾಯಗೊಂಡಿದ್ದ ನಿರ್ವಾಹಕ ಬಸವರಾಜ (38) ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಮೃತಪಟ್ಟರು. ಹಳೆ ಬಸ್ ಆಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಲಿಂಗಸುಗೂರು ತಾಲ್ಲೂಕಿನ ನೀರಲಕೇರಿ ಗ್ರಾಮದ ಬಸವರಾಜ ಅವರ ಪತ್ನಿ ಗರ್ಭಿಣಿಯಾಗಿದ್ದು ಬುಧವಾರ ಸೀಮಂತ ಕಾರ್ಯಕ್ರಮವಿತ್ತು. ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕ ಮನೆ ಮಾಡಿದೆ.

ಅಪಘಾತದ ತಕ್ಷಣ ಸಾರ್ವಜನಿಕರು ಆಂಬುಲೆನ್ಸ್‌ಗೆ ಕರೆ ಮಾಡಿದರೂ ಸುಮಾರು ಒಂದೂವರೆ ಗಂಟೆಯಾದರೂ ಆಂಬುಲೆನ್ಸ್ ಬಾರದೆ ಹಿನ್ನೆಲೆ ಲಿಂಗಸೂಗೂರು ಡಿವೈಎಸ್ಪಿ ಮತ್ತು ಪೊಲೀಸರ ವಾಹನದಲ್ಲಿ ಗಾಯಾಳು ಶಾಲಾ ಮಕ್ಕಳು ಮತ್ತು ನಿರ್ವಾಹಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ. ದೇವದುರ್ಗ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಸವರಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.