ADVERTISEMENT

ರೈತರಿಂದ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 14:42 IST
Last Updated 17 ಜೂನ್ 2019, 14:42 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಪುಸ್ತಕ ಬಿಡುಗಡೆ ಮಾಡಲಾಯಿತು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಪುಸ್ತಕ ಬಿಡುಗಡೆ ಮಾಡಲಾಯಿತು   

ರಾಯಚೂರು: ಸರ್ಕಾರಿ ಯೋಜನೆಗಳ ನೋಂದಣಿ ಸಂದರ್ಭದಲ್ಲಿ ಸಾಮಾನ್ಯ ಸೇವಾ ಕೇಂದ್ರದವರು ರೈತರಿಂದ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯಿಂದ 2019-20ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಕಾರ್ಮಿಕ ಇಲಾಖೆಯ ಕುರಿತು ಸಾಮಾನ್ಯ ಸೇವಾ ಕೇಂದ್ರಗಳ ಮಾಲೀಕರಿಗೆ ಸೋಮವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಫಸಲ ಬೀಮಾ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ನೋಂದಣಿಗೆ ಸರ್ಕಾರದಿಂದಲೇ ಹಣ ಪಾವತಿ ಮಾಡಲಾಗುತ್ತಿದೆ. ಆದ್ದರಿಂದ ಯಾವುದೇ ರೀತಿಯ ಹಣ ರೈತರಿಂದ ಪಡೆಯಬಾರದು ಎಂದು ಎಚ್ಚರಿಸಿದರು.

ADVERTISEMENT

ಜಿಲ್ಲೆಯಲ್ಲಿ ಸುಮಾರು 3.72 ಲಕ್ಷ ರೈತರಿದ್ದಾರೆ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರಿನಲ್ಲಿ 48 ಸಾವಿರದಷ್ಟು ರೈತರು ನೋಂದಾಯಿಸಿಕೊಂಡಿದ್ದರು. ಆದರೆ ಈ ವರ್ಷ ಕಡಿಮೆ ಅವಧಿ ಇರುವ ಕಾರಣದಿಂದ ಎಲ್ಲ ರೈತರಿಗೆ ಯೋಜನೆಯ ಲಾಭವನ್ನು ದೊರಕಿಸಲು ಸಹಕಾರ ನೀಡಬೇಕು ಎಂದರು.

2016-17ನೇ ಸಾಲಿನಲ್ಲಿ ಫಸಲ್ ಬೀಮಾ ಯೋಜನೆಯಡಿ ರೈತರು ₹50 ಕೋಟಿ ಪರಿಹಾರ ಪಡೆದಿದ್ದಾರೆ. 2017–18ನೇ ಸಾಲಿನಲ್ಲಿ ₹70 ಕೋಟಿ ಪರಿಹಾರ ಪಡೆದಿದ್ದಾರೆ. ಯೋಜನೆಗೆ ನೋಂದಾಯಿಸಿಕೊಳ್ಳುವ ಕುರಿತು ಜಿಲ್ಲೆಯಲ್ಲಿನ 300 ಸಾಮಾನ್ಯ ಸೇವಾ ಕೇಂದ್ರಗಳ ಮುಖ್ಯಸ್ಥರೆಲ್ಲರೂ ತರಬೇತಿ ಪಡೆದುಕೊಳ್ಳಬೇಕು ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ , ಪ್ರಕೃತಿ ವಿಕೋಪಗಳು ಸಂಭವಿಸಿದಾಗ ರೈತರಿಗೆ ಅನುಕೂಲವಾಗಲು ಪ್ರಧಾನಮಂತ್ರಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಪ್ರತಿಯೊಂದು ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರ ಬೆಳೆಗಳ ವಿವರವನ್ನು ಅಚ್ಚುಕಟ್ಟಾಗಿ ಭರ್ತಿ ಮಾಡಬೇಕು ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಸ್.ಕುಲಕರ್ಣಿ, ಫ್ಯೂಚರ್ ಜನರಾಲಿ ಇನ್ಶುರನ್ಸ್ ಕಂಪೆನಿ ಆಪ್ ಇಂಡಿಯಾದ ಜಿಲ್ಲಾ ಸಂಯೋಜಕ ಸಂದೇಶ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂದೀಪ್ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.