ADVERTISEMENT

ಕವಿತಾಳ: ಹಾಲಾಪುರ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 4:46 IST
Last Updated 19 ಏಪ್ರಿಲ್ 2024, 4:46 IST
ಕವಿತಾಳ ಸಮೀಪದ ಹಾಲಾಪುರದಲ್ಲಿ ಸಾರ್ವಜನಿಕರು ರಾತ್ರಿ ವೇಳೆ ನೀರಿಗಾಗಿ ಪರದಾಡುತ್ತಿರುವುದು
ಕವಿತಾಳ ಸಮೀಪದ ಹಾಲಾಪುರದಲ್ಲಿ ಸಾರ್ವಜನಿಕರು ರಾತ್ರಿ ವೇಳೆ ನೀರಿಗಾಗಿ ಪರದಾಡುತ್ತಿರುವುದು   

ಕವಿತಾಳ: ಹಾಲಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಹನಿ ನೀರಿಗಾಗಿ ಮಹಿಳೆಯರು, ಮಕ್ಕಳು ನಲ್ಲಿ ಹತ್ತಿರ ಹಗಲು, ರಾತ್ರಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರ ಮಸ್ಕಿಗೆ 9 ಕಿ.ಮೀ. ದೂರದ ಹಾಲಾಪುರ ಗ್ರಾಮ ಸಂಪೂರ್ಣ ನೀರಾವರಿ ವ್ಯವಸ್ಥೆ ಹೊಂದಿದ್ದು ತುಂಗಭದ್ರ ಎದಡಂಡೆ ಕಾಲುವೆಯಲ್ಲಿ ನೀರು ಸ್ಥಗಿತವಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ.

ಗ್ರಾಮಕ್ಕೆ ನೀರು ಪೂರೈಸಲು ಇರಕಲ್‌ ಹತ್ತಿರ ಕೆರೆ ನಿರ್ಮಿಸಿದ್ದರೂ ಕೆರೆ ಭರ್ತಿ ಮಾಡುವಲ್ಲಿ ಅಧಿಕಾರಿಗಳು ಕಾಳಜಿ ವಹಿಸದ ಕಾರಣ ಕೆರೆಯಲ್ಲಿ ನೀರು ಖಾಲಿಯಾಗಿದೆ. ಸಮರ್ಪಕ ಪೈಪ್‌ಲೈನ್ ವ್ಯವಸ್ಥೆ ಇಲ್ಲದ ಕಾರಣ ಕೊಳವೆಬಾವಿ ನೀರು ಪೂರೈಸಲಾಗುತ್ತದೆ.

ADVERTISEMENT

ಅಂದಾಜು 2 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮದಲ್ಲಿ 8 ಕೊಳವೆಬಾವಿಗಳಿದ್ದು 25 ಕಿ.ವ್ಯಾ. ಪರಿವರ್ತಕ ಅಳವಡಿಸಿದ ಪರಿಣಾಮ ವೊಲ್ಟೋಜ್‌ ಸಮಸ್ಯೆಯಿಂದ ಹಗಲಿನ ಸಮಯದಲ್ಲಿ ಕೊಳವೆಬಾವಿ ಮೋಟಾರು ಕೆಲಸ ಮಾಡುವುದಿಲ್ಲ. ಹೀಗಾಗಿ ರಾತ್ರಿ ವೇಳೆ ಒಮ್ಮೆಗೆ ನೀರು ಬಿಡುತ್ತಿದ್ದು ಮಹಿಳೆಯರು ಮತ್ತು ಮಕ್ಕಳು ಕತ್ತಲಿನಲ್ಲಿ ನೀರಿಗಾಗಿ ಪರದಾಡುವ ದೃಶ್ಯ ಸಾಮಾನ್ಯವಾಗಿದೆ.

ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಅಂದಾಜು ₹ 95 ಲಕ್ಷ ವೆಚ್ಚದಲ್ಲಿ ಜಲ ಜೀವನ್‌ ಮಿಷನ್‌ ಕಾಮಗಾರಿ ಕೈಗೊಳ್ಳಲಾಗಿದೆ. ಮೇಲ್ತೊಟ್ಟಿ ನಿರ್ಮಿಸಿ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿ ಮೀಟರ್‌ ಅಳವಡಿಸಿದ್ದರೂ ನಳಗಳಲ್ಲಿ ಹನಿ ನೀರು ಬಂದಿಲ್ಲ. ಪೈಪ್‌ ಅಳವಡಿಕೆಗೆ ರಸ್ತೆ ಅಗೆದು ಹದಗೆಡಿಸಿದ್ದು ಬಿಟ್ಟರೆ ಇಡೀ ವ್ಯವಸ್ಥೆ ಹಳ್ಳ ಹಿಡಿದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮದಲ್ಲಿನ ನಾಲ್ಕು ನೀರಿನ ಟ್ಯಾಂಕ್‌ ನಿರುಪಯುಕ್ತವಾಗಿದ್ದು, ಅವುಗಳಿಗೆ ನೀರು ಭರ್ತಿ ಮಾಡದೇ ಕೊಳವೆಬಾಗಿಳಿಂದ ನೇರವಾಗಿ ಪೂರೈಸಲಾಗುತ್ತಿದೆ. ಹೀಗಾಗಿ ವಿದ್ಯುತ್‌ ಸಮಸ್ಯೆಯಾದರೆ ನೀರಿಗೂ ಪರದಾಡಬೇಕಾಗುತ್ತದೆ.

’ಕಳೆದ ಒಂದು ತಿಂಗಳಿಂದ ಅಭಿವೃದ್ದಿ ಅಧಿಕಾರಿ ಪಂಚಾಯಿತಿಗೆ ಬಂದಿಲ್ಲ. ಹೀಗಾಗಿ ನೀರಿನ ಸಮಸ್ಯೆ ಬಗ್ಗೆ ಕೇಳೋರು ಇಲ್ಲದಂತಾಗಿದೆ. ಪಂಚಾಯಿತಿಯಲ್ಲಿ ದಾಖಲೆ ಪಡೆಯಲು ಮತ್ತಿತರ ಕೆಲಸಗಳಿಗೆ ನಿತ್ಯ ಅಲೆಯುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕು’ ಎಂದು ಗ್ರಾಮದ ಅಮರಪ್ಪ ಮಾಲಿ ಪಾಟೀಲ ಒತ್ತಾಯಿಸಿದರು.

’ರಾತ್ರಿ ವೇಳೆ ನೀರು ಬಿಡುವುದರಿಂದ ಕತ್ತಲಲ್ಲಿ ವಿಷ ಜಂತುಗಳನ್ನು ಲೆಕ್ಕಿಸದೆ ಹೋಗಬೇಕಿದೆ. ಮನೆ ಬಳಕೆಗೆ ಸಾಕಾಗುವಷ್ಟು ಹಾಗೂ ಜಾನುವಾರುಗಳಿಗೆ ಕುಡಿಯಲು ಸಮರ್ಪಕವಾಗಿ ನೀರು ಸಿಗುತ್ತಿಲ್ಲʼ ಎಂದು ಶಾಂತಮ್ಮ, ದುರಗಮ್ಮ ಆರೋಪಿಸಿದರು.

ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಅಭಿವೃದ್ದಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಕುಡಿಯುವ ನೀರು ಮತ್ತು ವಿವಿಧ ಕೆಲಸಗಳಿಗೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ
ಸಿದ್ದಾರ್ಥ ಪಾಟೀಲ, ಸ್ಥಳೀಯ
ಪಿಡಿಒ ವರ್ಗಾವಣೆ ಮಾಡಿ ಮತ್ತೊಬ್ಬರ ನೇಮಕ ಮಾಡುವಂತೆ ಜಿ.ಪಂ ಸಿಇಒ ಅವರಿಗೆ ಪತ್ರ ಬರೆಯಲಾಗಿದೆ, ಪರಿವರ್ತಕ ಬದಲಿಸಿ ವೊಲ್ಟೇಜ್‌ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು
ಅಂಬರೀಷ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಸ್ಕಿ
ಕವಿತಾಳ ಸಮೀಪದ ಹಾಲಾಪುರದಲ್ಲಿ ಸಾರ್ವಜನಿಕರು ರಾತ್ರಿ ವೇಳೆ ನೀರಿಗಾಗಿ ಪರದಾಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.