ADVERTISEMENT

ಕವಿತಾಳ: ರೈತರ ಪಾಲಿಗೆ ‘ಖಾರʼವಾದ ಮೆಣಸಿನಕಾಯಿ‌

ಕಳೆದ ವರ್ಷ ಗರಿಷ್ಟ ₹ 63 ಸಾವಿರವಿದ್ದ ಬ್ಯಾಡಗಿ ದರ ಸದ್ಯ ₹ 35 ಸಾವಿರಕ್ಕೆ ಕುಸಿತ

ಮಂಜುನಾಥ ಎನ್ ಬಳ್ಳಾರಿ
Published 9 ಜನವರಿ 2024, 6:02 IST
Last Updated 9 ಜನವರಿ 2024, 6:02 IST
ಕವಿತಾಳದಲ್ಲಿ ಬಿಸಿಲಿಗೆ ಮೆಣಸಿನಕಾಯಿ ಒಣಗಿಸಿದ ರೈತರು
ಕವಿತಾಳದಲ್ಲಿ ಬಿಸಿಲಿಗೆ ಮೆಣಸಿನಕಾಯಿ ಒಣಗಿಸಿದ ರೈತರು   

ಕವಿತಾಳ: ಮಾರುಕಟ್ಟೆಯಲ್ಲಿ ದರ ಮತ್ತು ಬೇಡಿಕೆ ಕುಸಿತದಿಂದ ಮೆಣಸಿನಕಾಯಿ ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಈ ಸಲ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಬ್ಯಾಡಗಿ ಸೇರಿದಂತೆ ವಿವಿಧ ತಳಿ ಖಾರದ ಮೆಣಸಿನಕಾಯಿ ಬೆಳೆಯಲು ರೈತರು ಸಾಕಷ್ಟು ಕಷ್ಟಪಟ್ಟಿದ್ದರು. ತೇವಾಂಶ ಕಾಯ್ದುಕೊಳ್ಳಲು, ರೋಗಬಾಧೆಯಿಂದ ಬೆಳೆ ರಕ್ಷಿಸಲು ಹೆಚ್ಚಿನ ಖರ್ಚು ಮಾಡಿದ್ದರು. ಈಗ ಫಸಲು ಕೈಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಆಗಿರುವ ದರ ಕುಸಿತ ರೈತರ ಸಂಕಷ್ಟ ಹೆಚ್ಚಿಸಿದೆ.

ಕಳೆದ ಡಿಸೆಂಬರ್‌ ತಿಂಗಳಲ್ಲಿ ಪ್ರತಿ ಕ್ವಿಂಟಲ್‌ಗೆ ₹60ರಿಂದ ₹70 ಸಾವಿರ ಗರಿಷ್ಠ ದರವಿದ್ದ ಕಡ್ಡಿ ಬ್ಯಾಡಗಿ ಮೆಣಸಿನಕಾಯಿ ಸದ್ಯ ₹35-₹40 ಸಾವಿರಕ್ಕೆ ಕುಸಿದಿದೆ. ಕಳೆದ ವರ್ಷದಲ್ಲಿ ₹30 ಸಾವಿರವಿದ್ದ ಖಾರದ ಕಾಯಿ ಸದ್ಯ ₹19 ಸಾವಿರಕ್ಕೆ ಕುಸಿದಿದೆ.

ADVERTISEMENT

‘ಬಿತ್ತನೆ ಬೀಜ, ಸಸಿಗಳು, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಈ ವರ್ಷ ಸಾಕಷ್ಟು ವೆಚ್ಚ ಮಾಡಿದ್ದೇವೆ.  ಮಳೆ ಕೊರತೆಯಿಂದ ನಿರ್ವಹಣೆ ವೆಚ್ಚವೂ ಹೆಚ್ಚಿದೆ. ಇಳುವರಿಯೂ ಕುಸಿದಿದೆ. ಇದೀಗ ಮಾರುಕಟ್ಟೆಯಲ್ಲಿ ದರವೂ ಕುಸಿದಿದೆ. ಈ ಭಾಗದಲ್ಲಿ ಶೀತಲೀಕರಣ ಘಟಕವೂ ಇಲ್ಲ. ಹೀಗಾಗಿ ಮೆಣಸಿನಕಾಯಿ ಫಸಲನ್ನು ಹೆಚ್ಚು ದಿನ ದಾಸ್ತಾನು ಮಾಡಲೂ ಸಾಧ್ಯವಿಲ್ಲ. ಹೀಗಾಗಿ 20 ದಿನಗಳಷ್ಟು ಕಾಯ್ದು ನೋಡಿ ಇರುವ ದರಕ್ಕೆ ಫಸಲು ಮಾರುವುದು ಅನಿವಾರ್ಯ’ ಎಂಬುದು ರೈತರ ಅಳಲು.

ಕವಿತಾಳದಲ್ಲಿ ಬಿಸಿಲಿಗೆ ಮೆಣಸಿನಕಾಯಿ ಒಣಗಿಸಿದ ರೈತರು

‘ಕಳೆದ ವರ್ಷ ಫಸಲು ಬರುತ್ತಿದ್ದಂತೆ ದಲ್ಲಾಳಿಗಳು ಜಮೀನಿಗೇ ಬಂದು ಮೆಣಸಿನಕಾಯಿ ಖರೀದಿಗೆ ಪೈಪೋಟಿ ಮಾಡುತ್ತಿದ್ದರು. ಈ ವರ್ಷ ಫಸಲು ಕೇಳುವವರೇ ಇಲ್ಲದಂತಾಗಿದೆ. ಸಮೀಪದ ಮಾರುಕಟ್ಟೆಗೆ ರೈತರೇ ಫಸಲು ತೆಗೆದುಕೊಂಡು ಹೋಗಬೇಕಿದೆ. ಈ ಭಾಗದಲ್ಲಿ ಕಡ್ಡಿ ಬ್ಯಾಡಗಿ, ಸೂಪರ್‌ ಟನ್‌ ಮತ್ತು 15531 ಸೇರಿದಂತೆ ವಿವಿಧ ತಳಿ ಮೆಣಸಿನಕಾಯಿ ಬೆಳೆಯಲಾಗಿದೆ. ಜಮೀನು ಗುತ್ತಿಗೆ ಪಡೆದು ಕೃಷಿ ಮಾಡಿದ ರೈತರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ’ ಎಂದು ರೈತ ಮೆಹಬೂಬ ಹೇಳುತ್ತಾರೆ.‌

‘ಶೀತಲೀಕರಣ ಘಟಕದಲ್ಲಿ ದಾಸ್ತಾನು ಮಾಡಿದ ಕಳೆದ ವರ್ಷದ ಬ್ಯಾಡಗಿ ಮೆಣಸಿನಕಾಯಿಯನ್ನು ಡಿಸೆಂಬರ್‌ ತಿಂಗಳಲ್ಲಿ ಕ್ವಿಂಟಲ್‌ಗೆ ₹60 ಸಾವಿರದವರೆಗೆ ಕೇಳಿದರೂ ರೈತರು ಮಾರಾಟ ಮಾಡಲಿಲ್ಲ. ಈಗ ಹೊಸ ಫಸಲು ಬಂದಿದ್ದು, ದರವೂ ಇಳಿದಿದೆ. ಇದರಿಂದ ರೈತರು ಮರುಗುತ್ತಿದ್ದಾರೆ’ ಎಂದು ವರ್ತಕರೊಬ್ಬರು ಪ್ರತಿಕ್ರಿಯಿಸಿದರು.

ಮೆಹಬೂಬ್
ಜಮೀನು ಗುತ್ತಿಗೆ ಪಡೆದು ಮೆಣಸಿನಕಾಯಿ ಬೆಳೆದಿದ್ದೇನೆ. ದರ ಮತ್ತು ಬೇಡಿಕೆ ಕುಸಿತದಿಂದ ಆತಂಕವಾಗುತ್ತಿದೆ. ದಾಸ್ತಾನು ಮಾಡಲೂ ಸಾಧ್ಯವಾಗುವುದಿಲ್ಲ
ಮೆಹಬೂಬ ಕವಿತಾಳ ರೈತ
ಲಕ್ಷ್ಮೀಪತಿ ಯಾದವ
ಮಳೆ ಕೊರತೆಯಿಂದ ಈ ವರ್ಷ ಬೆಳೆ ನಿರ್ವಹಣೆಗೆ ಅಧಿಕ ಖರ್ಚು ಮಾಡಿದ್ದೇವೆ. ಇಳುವರಿ ಕಡಿಮೆ ಬಂದಿದೆ. ಈಗ ದರ ಕುಸಿತದ ಪರಿಣಾಮ ನಷ್ಟ ಅನುಭವಿಸುವಂತಾಗಿದೆ
ಲಕ್ಷ್ಮೀಪತಿ ಯಾದವ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.