ADVERTISEMENT

ಲಿಂಗಸುಗೂರು: ಬೆಂಕಿ ನಂದಿಸಲು ವಾಹನದ ಕೊರತೆ

ಪ್ರಜಾವಾಣಿ ವಿಶೇಷ
Published 9 ಅಕ್ಟೋಬರ್ 2025, 6:13 IST
Last Updated 9 ಅಕ್ಟೋಬರ್ 2025, 6:13 IST
ಲಿಂಗಸುಗೂರು ಪಟ್ಟಣದ ಅಗ್ನಿಶಾಮಕ ಠಾಣೆ
ಲಿಂಗಸುಗೂರು ಪಟ್ಟಣದ ಅಗ್ನಿಶಾಮಕ ಠಾಣೆ   

ಲಿಂಗಸುಗೂರು: ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಉಳಿದ ಸೌಲಭ್ಯಗಳಿದ್ದರೂ ತುರ್ತು ಬೆಂಕಿ ಅನಾಹುತ ನಿಯಂತ್ರಿಸಲು ಅಗತ್ಯ ವಾಹನದ ಕೊರತೆ ಎದುರಾಗಿದೆ.

30 ವರ್ಷಗಳ ಹಿಂದೆ ಪಟ್ಟಣಕ್ಕೆ ಅಗ್ನಿಶಾಮಕ ಠಾಣೆ ಮಂಜೂರಾಗಿದೆ. 1998ರಲ್ಲಿ ಠಾಣೆ ಉದ್ಘಾಟಿಸಲಾಗಿದೆ. ಠಾಣೆಗೆ ಒಂದು ಅಗ್ನಿಶಾಮಕ ವಾಹನ ಮಂಜೂರಾಗಿತ್ತು. ಆರಂಭದಲ್ಲಿ ಒಂದು ವಾಹನ ಒದಗಿಸಲಾಗಿತ್ತು. ಅದು 25 ವರ್ಷಗಳಷ್ಟು ಹಳೆಯದಾದ ಕಾರಣ ಅದನ್ನು ಬಳಕೆ ಮಾಡದೇ ಠಾಣೆಯಲ್ಲಿ ನಿಲ್ಲಿಸಲಾಗಿದೆ.

ಮತ್ತೊಂದು ವಾಹನ 18 ವರ್ಷಗಳಷ್ಟು ಹಳೆಯದಾಗಿದ್ದರಿಂದ ಅದನ್ನು ಕೂಡ ಬಳಕೆ ಮಾಡದೇ ಗುಜರಿಗೆ ಹಾಕಲು ತೀರ್ಮಾನಿಸಿದ್ದರಿಂದ ಎರಡು ವಾಹನಗಳನ್ನು ಠಾಣೆಯಲ್ಲಿ ನಿಲ್ಲಿಸಲಾಗಿದೆ. ಬೆಂಕಿ ಅವಘಡಗಳು ಉಂಟಾದಾಗ ನಿಯಂತ್ರಿಸಲು ವಾಹನಗಳೇ ಇಲ್ಲದೇ ಇರುವುದರಿಂದ ಗಂಗಾವತಿಯಿಂದ ತಾತ್ಕಾಲಿಕವಾಗಿ ಒಂದು ವಾಹನ ಒದಗಿಸಲಾಗಿದೆ. ಇನ್ನೂ 6 ತಿಂಗಳು ಕಳೆದರೆ ಆ ವಾಹನದ ಎಫ್‌ಸಿ ಮುಗಿಯುತ್ತದೆ. ಅದನ್ನು ಸಹ ಗುಜರಿಗೆ ಹಾಕಬೇಕಾಗುತ್ತದೆ.

ADVERTISEMENT

ಸರಾಸರಿ 170 ಕರೆಗಳು: ಬೇರೆ ತಾಲ್ಲೂಕಿಗಳಿಗೆ ಹೋಲಿಸಿದರೆ ಲಿಂಗಸುಗೂರು ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ. ಆಗಾಗ ನಾನಾ ಕಾರಣಗಳಿಂದ ಬೆಂಕಿ ಅವಘಡಗಳು ಸಂಭವಿಸುತ್ತವೆ. ಬೇಸಿಗೆಯ ಬಿರು ಬಿಸಿಲಿನ ದಿನಗಳಲ್ಲಿ ಅನೇಕ ಬೆಂಕಿ ಅವಘಡಗಳು ಉಂಟಾಗಿವೆ.

ಪಟ್ಟಣ ಸೇರಿ ತಾಲ್ಲೂಕಿನ ಗ್ರಾಮೀಣ ಭಾಗದಿಂದ ಈ ವರ್ಷ ಜನವರಿಯಿಂದ ಇಲ್ಲಿವರೆಗೂ 114 ಕರೆಗಳು ಬಂದಿವೆ. ಪಟ್ಟಣದ ಅಗ್ನಿಶಾಮಕ ಠಾಣೆಗೆ ಬರುವ ವಾರ್ಷಿಕ ಸರಾಸರಿ 170 ಕರೆಗಳಿಗೆ ಸ್ಪಂದನೆ ಮಾಡಿ ಇರುವ ಒಂದೇ ವಾಹನದಿಂದಲೇ ತ್ವರಿತ ಸೇವೆ ನೀಡುವುದೇ ಇಲ್ಲಿನ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.

15 ವರ್ಷ ಪೂರೈಸಿದ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದ ಕಾರಣ ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಎರಡು ವಾಹನಗಳ ಅವಧಿ ಮುಗಿದಿದ್ದು ಅವುಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಕಾರಣ ಅವುಗಳನ್ನು ಗುಜರಿಗೆ ಹಾಕಲಾಗುತ್ತಿದೆ.

ಸಣ್ಣ ಪ್ರಮಾಣ ಬೆಂಕಿ ಅವಘಡಗಳಿಗೆ ಒಂದೇ ವಾಹನ ನಡೆಯುತ್ತದೆ. ಆದರೆ, ಗಂಭೀರ ಪ್ರಮಾಣದ ಬೆಂಕಿ ಅವಘಡಗಳಿಗೆ ಹೆಚ್ಚಿನ ವಾಹನಗಳ ಅಗತ್ಯ ಇರುತ್ತದೆ. ಈ ಸಂದರ್ಭದಲ್ಲಿ ಅಕ್ಕಪಕ್ಕದ ತಾಲ್ಲೂಕಿನಿಂದ ಅಗ್ನಿಶಾಮಕ ವಾಹನಗಳನ್ನು ತರಿಸಬೇಕಾದ ಅನಿವಾರ್ಯತೆ ಇದೆ.

ತಾಲ್ಲೂಕಿನ ಜನಸಂಖ್ಯೆ ಹಾಗೂ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಪಟ್ಟಣದ ಅಗ್ನಿ ಶಾಮಕ ಠಾಣೆಗೆ ಒಟ್ಟು ಎರಡು ವಾಹನಗಳ ಅಗತ್ಯ ಇದೆ. ಆದರೆ, 30 ವರ್ಷಗಳ ಹಿಂದಿನ ಜನಸಂಖ್ಯೆಯ ಆಧಾರದ ಮೇಲೆ ವಾಹನ ಸೌಲಭ್ಯ ನೀಡಿದರೆ ಹೇಗೆ? ಎರಡು ವಾಹನಗಳಿಗೆ ಮಂಜೂರಾತಿ ನೀಡಬೇಕು. ಕೂಡಲೇ ಹೊಸ ವಾಹನಗಳನ್ನು ಒದಗಿಸಲು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು ಎಂದು ಗುರುಗುಂಟಾ ಗ್ರಾಮದ ನಿವಾಸಿ ಮಾಣಿಕ್ ಇಂಗಳೆ ಹೇಳುತ್ತಾರೆ.

ಪಟ್ಟಣದ ಅಗ್ನಿ ಶಾಮಕ ಠಾಣೆಯಲ್ಲಿ ಎರಡು ವಾಹನಗಳ ಅವಧಿ ಮುಗಿದಿದೆ. ಅವುಗಳನ್ನು ಗುಜರಿಗೆ ಹಾಕಲಾಗುತ್ತಿದೆ. ಹೊಸ ವಾಹನ ಒದಗಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ. ಗಂಗಾವತಿಯಿಂದ ತಾತ್ಕಾಲಿಕವಾಗಿ ಒಂದು ವಾಹನ ಒದಗಿಸಿದ್ದರಿಂದ ತ್ವರಿತ ಸೇವೆ ನೀಡಲಾಗುತ್ತಿದೆ.
–ಹೊನ್ನಪ್ಪ, ಠಾಣಾಧಿಕಾರಿ ಅಗ್ನಿಶಾಮಕ ಠಾಣೆ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.