ಸಿಂಧನೂರು: ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಅಮೋಘ ಸಿದ್ದೇಶ್ವರ ಮಠದಲ್ಲಿ ಕನಕಭವನ ಉದ್ಘಾಟನೆ ಮತ್ತು ಆಧ್ಯಾತ್ಮಿಕ ಚಿಂತನೆ ಕಾರ್ಯಕ್ರಮಗಳ ಅಂಗವಾಗಿ ಶುಕ್ರವಾರ ತುರ್ವಿಹಾಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಂಧನೂರು ರುದ್ರಗೌಡ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ 300ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಯಿತು.
ಕ್ಷಯರೋಗ, ಶ್ವಾಸಕೋಶಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆ, ಕೀಲುನೋವು, ಹೃದಯ ಕಾಯಿಲೆ ಇರುವ ಜನರನ್ನು ತಪಾಸಣೆ ಮಾಡಿ ಔಷಧಿ ನೀಡಿ ಉಪಚರಿಸಲಾಯಿತು.
ಇತರ ಮಾರಕ ಕಾಯಿಲೆ ಇರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ತೆರಳಲು ಸಲಹೆ ನೀಡಲಾಯಿತು.
ರುದ್ರಗೌಡ ಆಸ್ಪತ್ರೆಯ ಡಾ.ಚನ್ನನಗೌಡ ಅವರು ನೂರಾರು ಜನರಿಗೆ ತಪಾಸಣೆ ಮಾಡಿದ್ದಲ್ಲದೇ ಉಚಿತವಾಗಿ 300 ಕನ್ನಡಕ ವಿತರಿಸಿದರು.
ಡಾ.ರಮೇಶ ಕರಡೋಣಿ, ಡಾ.ಆನಂದ, ಸರ್ಕಾರಿ ಆಸ್ಪತ್ರೆಯ ಡಾ.ಮೇರಿ ಬಂಢಾರಿ ಸೇರಿದಂತೆ ಹಲವು ವೈದ್ಯರು ತಪಾಸಣೆ ನಡೆಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯಕೀಯ ವೈದ್ಯರಾದ ಆನಂದ ಹೇರೂರು ಅವರು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿನಿತ್ಯ ಹೆಚ್ಚು ನೀರು ಕುಡಿಯಬೇಕು. ರಾತ್ರಿ ಸಮಯದಲ್ಲಿ ಮೊಸರು ಊಟ ಮಾಡಬಾರದು. ತಂಪು ಪಾನೀಯಗಳಿಗೆ ಮಾರು ಹೋಗಬಾರದು ಎಂದು ವಿವರಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ವೈದ್ಯರ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಮಠದ ಪೀಠಾಧಿಪತಿ ಮಾದಯ್ಯ ಗುರುವಿನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಬಾಬುಗೌಡ ದೇವರ ಮನಿ, ಸೋಮನಾಥ ಮಾಟೂರು, ಫಕೀರಪ್ಪ ಭಂಗಿ, ಪದ್ಮಾ ಅರುಣಾರೆಡ್ಡಿ, ಅಬುತುರಾಬ್, ಗೂಳಪ್ಪ ಕುಂಟೋಜಿ, ಮಲ್ಲಪ್ಪ ತೆಗ್ಗಿಹಾಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.