ADVERTISEMENT

ಹಟ್ಟಿ ಚಿನ್ನದ ಗಣಿ: ಅಭಿವೃದ್ಧಿ ಕಾಮಗಾರಿಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 6:44 IST
Last Updated 6 ಆಗಸ್ಟ್ 2025, 6:44 IST
<div class="paragraphs"><p>ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಜೆ.ಟಿ. ಪಾಟೀಲ ಧಾರುವಾಲ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆ ಪರಿಶೀಲನೆ ಮಾಡಿದರು</p></div>

ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಜೆ.ಟಿ. ಪಾಟೀಲ ಧಾರುವಾಲ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆ ಪರಿಶೀಲನೆ ಮಾಡಿದರು

   

ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನ ಐತಿಹಾಸಿಕವಾದದ್ದು ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.

ಹಟ್ಟಿ ಪಟ್ಟಣದ ಆಡಳಿತ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಸಂಪುಟದ ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಬುಧವಾರ ಮಧ್ಯಾಹ್ನ 12 ಗಂಟೆಗೆ ಹಟ್ಟಿ ಪಟ್ಟಣದ ಕ್ರೀಡಾಂಗಣದಲ್ಲಿ ನಡೆಯಲಿರುವ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕರ ವಸತಿ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭಕ್ಕೆ ಎಲ್ಲ ರೀತಿಯ ಅಗತ್ಯ ಸಿದ್ಧತೆಯಾಗಿದೆ. ಆಗಸ್ಟ್ 6ರಂದು ಬೆಳಿಗ್ಗೆ ಮುಖ್ಯಮಂತ್ರಿಗಳು ವಿಶೇಷ ವಿಮಾನದ ಮೂಲಕ ಕೊಪ್ಪಳ ಜಿಲ್ಲೆಯ ಖಾಸಗಿ ವಾಯುನೆಲೆಗೆ ಬಂದು, ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಹಟ್ಟಿ ಪಟ್ಟಣಕ್ಕೆ ಆಗಮಿಸುವರು’ ಎಂದರು.

‘1980ರಲ್ಲಿ ಮುಖ್ಯಮಂತ್ರಿ ಆಗಿದ್ದ ಆರ್.ಗುಂಡೂರಾವ್ ಅವರು ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅದಾದ ಬಳಿಕ 42 ವರ್ಷಗಳ ನಂತರ ಸಿದ್ದರಾಮಯ್ಯ ಅವರು ಪ್ರಥಮ ಬಾರಿಗೆ ಆಗಮಿಸಿ ಇತಿಹಾಸ ನಿರ್ಮಿಸಲಿದ್ದಾರೆ. ಹಟ್ಟಿ ಚಿನ್ನದ ಗಣಿ ಕಂಪನಿ ಆವರಣದಲ್ಲಿ ಅಂದಾಜು ₹998 ಕೋಟಿ ಮೊತ್ತದಲ್ಲಿ ವಸತಿ ಸಮುಚ್ಚಯ, ಶಾಲೆ, ಆಸ್ಪತ್ರೆ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದರು.

‘ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರೂ ಆದ ಶಾಸಕ ಆರ್.ಬಸನಗೌಡ ತುರ್ವಿಹಾಳ, ಸಂಸದ ಜಿ.ಕುಮಾರ ನಾಯಕ, ಶಾಸಕ ಡಾ.ಎಸ್.ಶಿವರಾಜ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಾಮಯ್ಯ ಮುರಾರಿ, ಲಿಂಗಸುಗೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವೆಂಕಟೇಶ್ ಆರ್.ಗುತ್ತೇದಾರ ಅತಿಥಿಗಳಾಗಿ ಭಾಗವಹಿಸುವರು. ಶಾಸಕ ಮಾನಪ್ಪ ಡಿ.ವಜ್ಜಲ್ ಅಧ್ಯಕ್ಷತೆ ವಹಿಸುವರು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿರುವರು’ ಎಂದು ತಿಳಿಸಿದರು.

ಹಟ್ಟಿ, ಲಿಂಗಸುಗೂರು, ಸಿರವಾರ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳಿಂದ ಅಂದಾಜು 20,000 ಜನ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕಿ ಆರ್.ಶಿಲ್ಪಾ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಹಾಜರಿದ್ದರು.

‘ಸಿಎಂ ಕಾರ್ಯಕ್ರಮ ಯಶಸ್ವಿಗೊಳಿಸೋಣ’

ರಾಯಚೂರು: ಹಟ್ಟಿ, ಲಿಂಗಸಗೂರು ಮತ್ತು ಸಿರವಾರ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಸ್ಟ್ 6ರಂದು ಹಟ್ಟಿ ಪಟ್ಟಣದಲ್ಲಿ ನಡೆಯಲಿರುವ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜು ಮನವಿ ಮಾಡಿದರು.

ಜಿಲ್ಲೆಯ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಇದ್ದೇವೆ. ಎಲ್ಲರೂ ಸೇರಿ ಹಟ್ಟಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ‘ಹಟ್ಟಿ ಚಿನ್ನದ ಗಣಿ ಕಂಪನಿಯು ಕರ್ನಾಟಕ ಸರ್ಕಾರದ ಚಿನ್ನ ಉತ್ಪಾದಿಸುವ ಏಕೈಕ ಕಂಪನಿಯಾಗಿದೆ. ಸಿಬ್ಬಂದಿಯ ಕಾರ್ಮಿಕರ ಕಲ್ಯಾಣಕ್ಕಾಗಿ ಕಂಪನಿಯು ಅನೇಕ ಯೋಜನೆಗಳನ್ನು ರೂಪಿಸಿದೆ. ಮುಂದುವರಿದ ಭಾಗವಾಗಿ ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕರ ವಸತಿ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.