ADVERTISEMENT

ರಾಯಚೂರು: ಪ್ರಚಾರಕ್ಕೆ ತೊಡಕಾದ ರಣ ಬಿಸಿಲು

ಮುಖಂಡರ ಒತ್ತಡದ ನಡುವೆಯೂ ಉರಿ ಬಿಸಿಲಲ್ಲಿ ಪ್ರಚಾರಕ್ಕೆ ಹಿಂದೇಟು ಹಾಕುತ್ತಿರುವ ಕಾರ್ಯಕರ್ತರು

ಚಂದ್ರಕಾಂತ ಮಸಾನಿ
Published 22 ಏಪ್ರಿಲ್ 2024, 6:29 IST
Last Updated 22 ಏಪ್ರಿಲ್ 2024, 6:29 IST
ರಾಯಚೂರಿನಲ್ಲಿ ಬಿಸಿಲು ಸಹಿಸಿಕೊಳ್ಳಲಾಗದೆ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಧ್ವಜದ ಬಟ್ಟೆ ತಲೆ ಮೇಲೆ ಹೊದ್ದುಕೊಂಡು ಬಿಸಿಲಿನಿಂದ ರಕ್ಷಣೆ ಪಡೆದರು / ಚಿತ್ರಗಳು: ಶ್ರೀನಿವಾಸ ಇನಾಮದಾರ್
ರಾಯಚೂರಿನಲ್ಲಿ ಬಿಸಿಲು ಸಹಿಸಿಕೊಳ್ಳಲಾಗದೆ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಧ್ವಜದ ಬಟ್ಟೆ ತಲೆ ಮೇಲೆ ಹೊದ್ದುಕೊಂಡು ಬಿಸಿಲಿನಿಂದ ರಕ್ಷಣೆ ಪಡೆದರು / ಚಿತ್ರಗಳು: ಶ್ರೀನಿವಾಸ ಇನಾಮದಾರ್   

ರಾಯಚೂರು: ಲೋಕಸಭಾ ಚುನಾವಣೆಗೆ ಹದಿನೈದು ದಿನಗಳು ಬಾಕಿ ಇವೆ. ಅಭ್ಯರ್ಥಿಗಳಿಗೆ ಗೆಲುವಿನ ಒತ್ತಡ ನಿದ್ದೆಗೆಡುವಂತೆ ಮಾಡಿದರೆ, ಹಗಲಿನಲ್ಲಿ ಉರಿ ಬಿಸಿಲು, ರಾತ್ರಿ ಧಗೆ ಕಾರ್ಯಕರ್ತರ ನಿದ್ದೆಗೆಡೆಸಿದೆ. ಮುಖಂಡರು ಒತ್ತಡ ಹಾಕುತ್ತಿದ್ದರೂ ಕಾರ್ಯಕರ್ತರು ಉರಿ ಬಿಸಿಲಲ್ಲಿ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಬಾಡಿಗೆ ಕಾರ್ಯಕರ್ತರನ್ನು ಕರೆಸಿದರೂ ರಾಜಕೀಯ ಪಕ್ಷಗಳಿಗೆ ನಿರೀಕ್ಷೆ ಮಟ್ಟದಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ಪಕ್ಷಗಳಲ್ಲಿನ ಆಂತರಿಕ ಬೇಗುದಿ, ವೈಯಕ್ತಿಕ ಪ್ರತಿಷ್ಠೆಗಳು ಬೇಸಿಗೆ ಧಗೆಯಲ್ಲೇ ಚುನಾವಣಾ ಕಾವು ಹೆಚ್ಚಿಸಿದೆ.

ಕಾರ್ಯಕರ್ತರು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರಿಗೆ ತಣ್ಣೀರು ಹಾಗೂ ಮಜ್ಜಿಗೆ ಕೊಡಿಸುವುದೇ ಮುಖಂಡರಿಗೆ ತಲೆ ನೋವಾಗಿದೆ. ಮತ್ತೆ ಸಂಜೆ 5 ಗಂಟೆಯ ನಂತರವೇ ಪ್ರಚಾರ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ವೇಳೆಯಲ್ಲೇ ಪ್ರಚಾರ ಸಭೆಗಳು ನಡೆಯುತ್ತಿವೆ.

ADVERTISEMENT

ಜಿಲ್ಲೆಯಲ್ಲಿ ಮರಗಳ ಸಂಖ್ಯೆಯೂ ಕಡಿಮೆ ಇದೆ. ಕಾರ್ಯಕರ್ತರು ಹಾಗೂ ಜನರು ಅಲ್ಲಲ್ಲಿ ಕಂಡು ಬರುವ ಬೇವಿನ ಮರಗಳ ಕೆಳಗೆ ಆಶ್ರಯ ಪಡೆಯತೊಡಗಿದ್ದಾರೆ. ಬೆಳಿಗ್ಗೆ 8 ಗಂಟೆ ವೇಳೆಗೆ ಧಗೆ ಆವರಿಸಿಕೊಳ್ಳುತ್ತಿದೆ. ಟವಾಲು, ಟೊಪ್ಪಿಗೆ, ಪೇಟ ಹಾಗೂ ನೀರಿನ ಬಾಟಲಿ ಇಲ್ಲದೆ ಮನೆಗಳಿಂದ ಹೊರಗೆ ಬೀಳುವುದು ಕಷ್ಟವಾಗಿದೆ. ಧಗೆಗೆ ಮೈಮೇಲಿನ ಬಟ್ಟೆಗಳು ಹಾಗೂ ರುಮಾಲುಗಳು ತೊಯ್ದು ತೊಪ್ಪೆಯಾಗುತ್ತಿವೆ. ಮೊದಲ ದಿನ ಪ್ರಚಾರಕ್ಕೆ ಬಂದ ವ್ಯಕ್ತಿಗಳು ಎರಡನೇ ದಿನ ಪ್ರಚಾರಕ್ಕೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಮಧ್ಯಾಹ್ನದ ಊಟ ಹಾಗೂ ಕೈತುಂಬ ಹಣ ಸಿಕ್ಕರೆ ಮಾತ್ರ ಹೋಗುತ್ತಿದ್ದಾರೆ.

ಅಭ್ಯರ್ಥಿಗಳು ಹಾಗೂ ಮುಖಂಡರು ಬಿಸಿಲಲ್ಲಿ ಪ್ರಚಾರ ಮಾಡಿ ಸುಸ್ತಾಗಿ ಮಧ್ಯಾಹ್ನ ಪರಿಚಯಸ್ಥರ ಫಾರ್ಮ್‌ಹೌಸ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವರು ಇದೇ ಸಮಯ ಬಳಸಿಕೊಂಡು ಗ್ರಾಮದ ಮುಖಂಡರನ್ನು ಕರೆಸಿಕೊಂಡು ಪಕ್ಷದ ಪರ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

‘ಅಪರೂಪಕ್ಕೆ ಮಳೆ ಬರುವ ಹಾಗೂ ಬಿಸಿಲು ಹೆಚ್ಚು ಇರುವ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಡಿಸೆಂಬರ್‌ ಅಥವಾ ಜುಲೈನಲ್ಲಿ ಚುನಾವಣೆ ನಡೆಸುವುದು ಒಳ್ಳೆಯದು. ಈ ವರ್ಷ ಬಿಸಿಲು ಹಾಗೂ ಧಗೆ ಜಾಸ್ತಿ ಇದೆ. ಒಂದು ತಾಸು ಬಿಸಿಲಲ್ಲಿ ತಿರುಗಾಡಿದರೆ ತಲೆ ಸುತ್ತು ಬರುತ್ತಿದೆ. ಬಿಸಿಲು ಪ್ರಚಾರಕ್ಕೂ ತೊಡಕು ಉಂಟು ಮಾಡಿದೆ’ ಎಂದು ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಯುವಕ ಶಿವಕುಮಾರ ಹೇಳಿದರು.

ಮಹಿಳೆಯರಂತೂ ಪ್ರಚಾರಕ್ಕೆ ಬರುತ್ತಿಲ್ಲ. ಅಪರೂಪಕ್ಕೆ ಎನ್ನುವಂತೆ ಪ್ರಚಾರದ ತಂಡಗಳಲ್ಲಿ ಒಬ್ಬರೋ, ಇಬ್ಬರೋ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯರು ಆರೋಗ್ಯ ಸಮಸ್ಯೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಯುವಕರೇ ಸಂಜೆ ವೇಳೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಸಿ ಧಗೆ ಅವರನನ್ನೂ ಸುಸ್ತೋ ಸುಸ್ತಾಗಿ ಮಾಡಿದೆ.

ತಂಪು ಪಾನೀಯಗಳಿಗೆ ಬೇಡಿಕೆ
ಚುನಾವಣಾ ಪ್ರಚಾರ ಸಭೆಗಳಲ್ಲಿ ತಂಪು ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳಕ್ಕೆ ತಂದ ಕೆಲವೇ ಕ್ಷಣಗಳಲ್ಲೇ ಅವು ಖಾಲಿಯಾಗುತ್ತಿವೆ. ಇನ್ನು ಸಭೆ ಸಮಾರಂಭಗಳಲ್ಲಿ ಹೊರಗಡೆ ವ್ಯಾಪಾರ ಮಾಡುವ ಐಸ್‌ಕ್ರೀಮ್ ಎಳನೀರು ಮಜ್ಜಿಗೆಗೆ ಭಾರಿ ಬೇಡಿಕೆ ಇದೆ. ಎಳನೀರಿನ ಬೆಲೆ ಗಗನಕ್ಕೆ ತಲುಪಿದೆ. ಎಳನೀರು ಬೆಲೆ ₹ 40ರಿಂದ ₹70ಕ್ಕೆ ಏರಿದೆ. ಹೀಗಾಗಿ ಜನ ಸುರಕ್ಷಿತವಲ್ಲದ ಪ್ಲಾಸ್ಟಿಕ್‌ ವಾಟರ್‌ ಪೌಚ್‌ಗಳಲ್ಲಿನ ನೀರು ಕುಡಿಯಲು ಬಳಸುತ್ತಿದ್ದಾರೆ. ಕೆಲ ಕಡೆ ದಾನಿಗಳು ಮಣ್ಣಿನ ಕೊಡಗಳಲ್ಲಿ ನೀರು ತುಂಬಿ ಇಡುತ್ತಿದ್ದಾರೆ. ಆದರೆ ಅವು ಸಹ ಆಗಾಗ ಖಾಲಿ ಯಾಗುತ್ತಿವೆ. ಜನರಿಗೆ ತಣ್ಣನೆಯ ನೀರು ಸಿಗುತ್ತಿಲ್ಲ. ತಂಪುಪಾನೀಯ ಅಂಗಡಿಗೆ ತೆರಳಿ ತಂಪಾದ ನೀರು ಖರೀದಿಸಿ ಇಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌
ಬಿಸಿಲ ನಾಡು ರಾಯಚೂರು ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್‌ ವರೆಗೆ ಇದೆ. ರಾತ್ರಿ ವೇಳೆಯಲ್ಲಿ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಮುಂದುವರಿದಿದೆ. ಹಗಲಿನಲ್ಲಿ 9 ಕಿ.ಮೀ ವೇಗದಲ್ಲಿ ಆಗಾಗ ಬಿಸಿಗಾಳಿ ಬೀಸುತ್ತಿದೆ. ಗಾಳಿಯಲ್ಲಿ ದೂಳು ಆವರಿಸಿಕೊಂಡು ಜನರನ್ನು ಹೈರಾಣು ಮಾಡಿದೆ. ಕಲ್ಲು ಬಂಡೆಗಳೇ ತುಂಬಿರುವ ಊರುಗಳಲ್ಲಿ ಉರಿ ಬಿಸಿಲಿಗೆ ಕಾದ ಕಲ್ಲುಗಳು ಸಂಜೆ ನಂತರ ಶಾಖ ಹೊರ ಸೂಸುತ್ತಿವೆ. ಗುಡ್ಡಕ್ಕೆ ಹೊಂದಿಕೊಂಡಿರುವ ಹಳ್ಳಿಗಳ ಜನರ ನೆಮ್ಮದಿ ಕಸಿದುಕೊಂಡಿದೆ. ಗ್ರಾಮಸ್ಥರು ಬೇಸಿಗೆ ಎಂದು ಕಳೆದೀತು ಎನ್ನುವ ಚಿಂತೆಯಲ್ಲೇ ಇದ್ದರೆ ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಮುಗಿದರೆ ಸಾಕು ಅಂದುಕೊಳ್ಳುತ್ತಿದ್ದಾರೆ.
ಮುಖ್ಯಾಂಶಗಳು
ಚೆಕ್‌ಪೋಸ್ಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ಬಿಸಿಲಿಗೆ ಹೈರಾಣು ಹೊಲಗಳಲ್ಲಿನ ಮರಗಳ ಕೆಳಗೆ ಜನರ ವಿಶ್ರಾಂತಿ ಬಿಸಿಲಿನ ಝಳಕ್ಕೆ ಹೆದರಿ ರಾತ್ರಿ ನೀರು ಪೂರೈಕೆ ಬಿಸಿಲಿಗೆ ಬತ್ತಿದ ಕೃಷ್ಣಾ ತುಂಗಭದ್ರಾ ನದಿಗಳು ಜನರ ಸಮಸ್ಯೆಗೆ ಸ್ಪಂದಿಸದ ಪಂಚಾಯಿತಿಗಳು ಚುನಾವಣೆ ಕಾರ್ಯದಲ್ಲಿ ಮುಳುಗಿದ ಅಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.