ADVERTISEMENT

ಸರ್ಕಾರಿ ಶಾಲೆಗಳ ಅವನತಿಯಿಂದ ಭಾರತದ ಬಹುತ್ವ ನಾಶ: ಪ್ರೊ ಕೆ.ವೆಂಕಟೇಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:26 IST
Last Updated 24 ಫೆಬ್ರುವರಿ 2026, 8:26 IST
ರಾಯಚೂರಿನಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ‘ಕಲ್ಯಾಣ ಕರ್ನಾಟಕದ ಶಿಕ್ಷಣದ ಸ್ಥಿತಿಗತಿ ಮತ್ತು ಗುಣಮಟ್ಟ ಶಿಕ್ಷಣ ಹೇಗೆ ಸಾಧ್ಯ’ ಕುರಿತು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕೆ.ವೆಂಕಟೇಶ ಮಾತನಾಡಿದರು
ರಾಯಚೂರಿನಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ‘ಕಲ್ಯಾಣ ಕರ್ನಾಟಕದ ಶಿಕ್ಷಣದ ಸ್ಥಿತಿಗತಿ ಮತ್ತು ಗುಣಮಟ್ಟ ಶಿಕ್ಷಣ ಹೇಗೆ ಸಾಧ್ಯ’ ಕುರಿತು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕೆ.ವೆಂಕಟೇಶ ಮಾತನಾಡಿದರು   

ರಾಯಚೂರು: ‘ಸರ್ಕಾರ ಜಾರಿಗೆ ತರಲು ಹೊರಟಿರುವ ಕೆ.ಪಿ.ಎಸ್ ಮ್ಯಾಗಟ್ನಿಕ್ ಶಾಲೆಯಿಂದ ರಾಜ್ಯದಲ್ಲಿ 25,683 ಶಾಲೆಗಳನ್ನು ವಿಲೀನದ ಹೆಸರಿನಲ್ಲಿ‌ ಮುಚ್ಚುತ್ತಿವೆ. ಇದು ಕೇವಲ ಶಾಲೆಯ ಅವನತಿ ಮಾತ್ರವಲ್ಲ ಬಹುತ್ವ ಸಂಸ್ಕೃತಿಯ ನಾಶವಾಗುತ್ತದೆ’ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕೆ.ವೆಂಕಟೇಶ ಎಚ್ಚರಿಸಿದರು.

ಇಲ್ಲಿಯ ನವೋದಯ ಶಿಕ್ಷಣ ಸಂಸ್ಥೆಯ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ವೇದಿಕೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ‌ಮಹಿಳಾ ಒಕ್ಕೂಟ ಮತ್ತು ಶಿಕ್ಷಣ ಹಕ್ಕಿಗಾಗಿ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ‘ಕಲ್ಯಾಣ ಕರ್ನಾಟಕದ ಶಿಕ್ಷಣದ ಸ್ಥಿತಿಗತಿ ಮತ್ತು ಗುಣಮಟ್ಟ ಶಿಕ್ಷಣ ಹೇಗೆ ಸಾಧ್ಯ’ ಎನ್ನುವ ವಿಷವಯಾಗಿ ಮಾತನಾಡಿದರು.

‘ಪ್ರತಿಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಎಸ್.ಎಸ್‌.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುವುದು ಈ ಭಾಗ ಶಿಕ್ಷಣದಲ್ಲಿ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದರು.

‘ರಾಜ್ಯದಲ್ಲಿ ಶೇ25ರಷ್ಟು ಮಕ್ಕಳಿಗೆ ಕನಿಷ್ಠ ಮಟ್ಟದ ಭಾಗ ಆಕಾರವು ಬಾರದಿರುವುದು ದುರಂತವೇ ಸರಿ . ಒಟ್ಟಿನಲ್ಲಿ ಸರ್ಕಾರಿ ಶಾಲೆಗಳು ಅಸ್ತಿತ್ವದಲ್ಲಿ ಇದ್ದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲಿದೆ. ಸರ್ಕಾರಿ ಶಾಲೆಗಳ ಅಂತ್ಯವಾದರೆ ಪ್ರಜಾಪ್ರಭುತ್ವ ನಾಶವಾಗಲಿದೆ ಸಂವಿಧಾನದ ಮೂಲ ಆಶಯಗಳು ಮಣ್ಣಾಗಲಿವೆ’ ಎಂದು ಹೇಳಿದರು.

ADVERTISEMENT

‘ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಗತ್ಯವಿರುವ ಶಿಕ್ಷಕರ ನೇಮಕಾತಿ ಮಾಡಬೇಕು . ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ , ಗಣಿತ, ವಿಜ್ಞಾನ ಶಿಕ್ಷಕರ ನೇಮಕಾತಿ ಆಗಬೇಕು. ಇಲ್ಲವಾದಲ್ಲಿ ಮಕ್ಕಳು ಪದವಿ ಹಂತದಲ್ಲಿಯೂ ಸಹ ತೊಂದರೆ ಎದುರಿಸಬೇಕಾಗುತ್ತದೆ’ ಎಂದು ತಿಳಿಸಿದರು.

‘ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಿಂದ ವಿಶ್ವವಿದ್ಯಾಲಯದ ನಡೆ ಸಮುದಾಯದ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದ್ದು. ವಿಶ್ವವಿದ್ಯಾಲಯದ ಪ್ರಾಧ್ಯಪಕರು ಬರುವ ಶೈಕ್ಷಣಿಕ ವರ್ಷದಿಂದ ಹತ್ತಿರದಲ್ಲೇ ಇರುವ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿವಿಧ ಕೌಶಲಗಳನ್ನು ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಈಗಾಗಿ ಸಮುದಾಯದ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.