ADVERTISEMENT

ರಾಯಚೂರು | ಸಂಕ್ರಾಂತಿʼಮಾಯʼವಾದ ಕುಂಬಳಕಾಯಿ; ಸೊಪ್ಪುಗಳ ದರ ಏರಿಕೆ

ಮಂಜುನಾಥ ಬಳ್ಳಾರಿ
Published 15 ಜನವರಿ 2024, 5:48 IST
Last Updated 15 ಜನವರಿ 2024, 5:48 IST
ಕವಿತಾಳದಲ್ಲಿ ಭಾನುವಾರ ಸಾರ್ವಜನಿಕರು ಸಂಕ್ರಾತಿ ಹಬ್ಬದ ನಿಮಿತ್ತ ತರಕಾರಿ ಮತ್ತು ಸೊಪ್ಪು ಖರೀದಿಸಿದರು
ಕವಿತಾಳದಲ್ಲಿ ಭಾನುವಾರ ಸಾರ್ವಜನಿಕರು ಸಂಕ್ರಾತಿ ಹಬ್ಬದ ನಿಮಿತ್ತ ತರಕಾರಿ ಮತ್ತು ಸೊಪ್ಪು ಖರೀದಿಸಿದರು   

ಕವಿತಾಳ: ಮಕರ ಸಂಕ್ರಾಂತಿ ಹಬ್ಬದ ವಿಶೇಷ ಭರ್ತಕ್ಕೆ (ವಿವಿಧ ತರಕಾರಿಗಳನ್ನು ಸೇರಿಸಿ ತಯಾರಿಸುವ ಪಲ್ಯ) ಪ್ರಮುಖವಾಗಿ ಬಳಸುವ ಕುಂಬಳಕಾಯಿ ಮಾರುಕಟ್ಟೆಯಲ್ಲಿ ಲಭ್ಯ ಇರಲಿಲ್ಲ. ಇದ್ದರೂ ದರ ಹೆಚ್ಚಾಗಿತ್ತು.

ಇಲ್ಲಿನ ಕೆಲವು ತರಕಾರಿ ವ್ಯಾಪಾರಸ್ಥರು ಕುಂಬ:ಕಾಯಿಯ ಒಂದು ಚಿಕ್ಕ ತುಂಡನ್ನು ₹10ನಂತೆ ಮಾರಾಟ ಮಾಡಿದರು.

ಭರ್ತದಲ್ಲಿ ಹೆಚ್ಚಾಗಿ ಕುಂಬಳಕಾಯಿಯನ್ನೇ ಬಳಸಲಾಗುತ್ತದೆ, ಹೀಗೆ ಸಣ್ಣ ಸಣ್ಣ ತುಂಡುಗಳನ್ನು ಎಷ್ಟು ಖರೀದಿಸಿದರೂ ಸಾಕಾಗುವುದಿಲ್ಲ ಎಂದು ಹೇಳುತ್ತಲೇ ಗ್ರಾಹಕರು ಸಂಪ್ರದಾಯದ ಪ್ರಕಾರ ಸ್ವಲ್ಪ ಬಳಸಿದರಾಯಿತು ಎಂದು ಖರೀದಿ ಮಾಡುತ್ತಿರುವುದು ಕಂಡುಬಂತು.

ADVERTISEMENT

₹5ಕ್ಕೆ ಒಂದು ಕಟ್ಟು ಸಿಗುತ್ತಿದ್ದ ಈರುಳ್ಳಿ ತಪ್ಪಲು, ಮೆಂತ್ಯ ಸೊಪ್ಪು , ಕೋತಂಬರಿ ಸೊಪ್ಪು, ಮೂಲಂಗಿ, ಪುದೀನಾ ಸೊಪ್ಪು, ಪಾಲಕ್‌ ಮತ್ತಿತರ ಸೊಪ್ಪುಗಳು ಸಣ್ಣದಾಗಿ ಕಟ್ಟಿದ ಒಂದು ಕಟ್ಟಿಗೆ ₹10 ರಂತೆ ಮಾರಾಟವಾದವು.

ಗ್ರಾಮೀಣ ಭಾಗದ ಹಳ್ಳಿಯಿಂದ ಬೆಳಿಗ್ಗೆ ಬಂದಿದ್ದ ತಾಜಾ ತರಕಾರಿ, ಸೊಪ್ಪು ಮತ್ತು ಕಬ್ಬನ್ನು ಗ್ರಾಹಕರು ಖರೀದಿಸಿದರು.

‘ಪ್ರತಿ ವಾರ ತರಕಾರಿ ಮಾರಾಟ ಮಾಡುತ್ತೇವೆ. ಸಂಕ್ರಾಂತಿ ಹಬ್ಬದ ನಿಮಿತ್ತ ಭಾನುವಾರ ಉತ್ತಮ ವ್ಯಾಪಾರವಾಗಿದೆ’ ಎಂದು ತರಕಾರಿ ವ್ಯಾಪಾರಿಗಳಾದ ದೇವಸಿಂಗ್‌ ರಜಪೂತ ಮತ್ತು ಲಕ್ಷ್ಮೀ ಹುಸೇನಪುರ ಹೇಳಿದರು.

ಬಾಗಿನ ಅರ್ಪಣೆ: ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಭೋಗಿ ಆಚರಿಸಲಾಯಿತು.

ಭೋಗಿ ನಿಮಿತ್ತ ಬ್ರಾಹ್ಮಣ ಸಮಾಜದ ಮಹಿಳೆಯರಿಗೆ ಬಾಗಿನ ಅರ್ಪಿಸಲಾಯಿತು. ಅಕ್ಕಿ, ಬೆಲ್ಲ, ಬೇಳೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು, ವಿವಿಧ ತರಕಾರಿ ಮತ್ತು ಹಸಿರು ಬಣ್ಣದ ರವಿಕೆ, ತೆಂಗಿನಕಾಯಿ, ಕೊಬ್ಬರಿ ಬಟ್ಟಲುಗಳನ್ನು ಹೊಸ ಮರಗಳಲ್ಲಿಟ್ಟು ಮಹಿಳೆಯರಿಗೆ ನೀಡಲಾಯಿತು.

‘ಪ್ರತಿ ವರ್ಷದ ಸಂಪ್ರದಾಯದಂತೆ ಭೋಗಿ ಆಚರಿಸಲಾಗಿದ್ದು ಸೋಮವಾರ ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ’ ಎಂದು ಅರ್ಚಕ ಗೋವಿಂದಾಚಾರ್‌ ಹೇಳಿದರು.

ಸಂಕ್ರಾಂತಿ ಖರೀದಿ ಜೋರು

ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಭಂಗಿಕುಂಟಾ, ಉಸ್ಮಾನಿಯಾ ತರಕಾರಿ ಮಾರುಕಟ್ಟೆ,‌ ಬಸವನಬಾವಿ ವೃತ್ತದ ಬಳಿ ಗ್ರಾಹಕರು ಕಬ್ಬು, ಹಸಿ ಕಡಲೆಕಾಯಿ,‌ ಕುಂಬಳಕಾಯಿ, ಕಬ್ಬು, ಸೇವಂತಿ, ಚೆಂಡು ಹೂವು ಇತರೆ ವಸ್ತುಗಳನ್ನು ಖರೀದಿ ಮಾಡಿದರು.

ಸಂಕ್ರಾಂತಿ ದಿನದಂದು ತರಹೇವಾರಿ ತರಕಾರಿ ಪಲ್ಲೆಗಳನ್ನು ತಯಾರಿಸಿ ಸಜ್ಜೆ ರೊಟ್ಟಿರೊಂದಿಗೆ ಸವಿಯುವುದು ವಿಶೇಷ. ರಾಯಚೂರಿನಲ್ಲಿರುವ ರೊಟ್ಟಿ ಕೇಂದ್ರಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿಯೇ ಸಜ್ಜೆ ರೊಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅಲ್ಲದೆ ಅಗಸಿ ಪುಡಿ, ಶೇಂಗಾ ಪುಡಿ, ಗುರೆಳ್ಳು ಪುಡಿ, ಪುಟಾಣಿ ಪುಡಿ, ರಂಜಕದ ಖಾರ ಹಾಗೂ ಪುಂಡಿ ಪಲ್ಲೆಗಳಿಗೂ ಬೇಡಿಕೆ ಹೆಚ್ಚಾಗಿದೆ.

‘ಕುಂಬಳಕಾಯಿ ₹80ರಿಂದ ₹150, ಕಬ್ಬು ದೊಡ್ಡದು ಒಂದಕ್ಕೆ ₹50, ಚಿಕ್ಕ ಬಾಳೆಹಣ್ಣು(ಜವಾರಿ) ₹50 ಡಜನ್, ಹಸಿ ಕಡಲೆಕಾಯಿ ₹70ಕ್ಕೆ ಒಂದು ಕೆ.ಜಿ, ಬಾರೆಹಣ್ಣು ₹50 ಕೆ.ಜಿ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯಾಪಾರ ಡಲ್ ಇದೆ. ಮೊದಲಿನಂತೆ ಹಬ್ಬದ ಖರೀದಿಯಲ್ಲಿ ಉತ್ಸಾಹ ಕಾಣುತ್ತಿಲ್ಲ, ಕೇವಲ ಸಾಂಪ್ರದಾಯ ಪಾಲನೆಗಾಗಿ ಚೌಕಾಸಿ ಮಾಡುತ್ತಾ ಖರೀದಿ ಮಾಡುತ್ತಿದ್ದಾರೆ‘ ಎಂದು ವ್ಯಾಪಾರಿ ವೀರೇಶ ತಿಳಿಸಿದರು.

ಕವಿತಾಳದಲ್ಲಿ ಭಾನುವಾರ ಸಾರ್ವಜನಿಕರು ಸಂಕ್ರಾತಿ ಹಬ್ಬದ ನಿಮಿತ್ತ ತರಕಾರಿ ಮತ್ತು ಸೊಪ್ಪು ಖರೀದಿಸುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.