ಲಿಂಗಸುಗೂರು: ಸುಮಾರು ತಿಂಗಳಿಂದ ಸ್ಥಗಿತಗೊಂಡಿದ್ದ 150ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುರುವಾರ ಪೊಲೀಸ್ ಭದ್ರತೆಯಲ್ಲಿ ಆರಂಭವಾಗಿದೆ.
ಹೊನ್ನಹಳ್ಳಿ ಗ್ರಾಮದ ಸಮೀಪದಿಂದ ಪಟ್ಟಣದ ಮೂಲಕ ಮಸ್ಕಿ ಪಟ್ಟಣವರೆಗೆ ಒಟ್ಟು 31 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 2023ರಲ್ಲಿ ಚಾಲನೆ ನೀಡಲಾಗಿತ್ತು. ವರ್ಷದ ಹಿಂದೆಯೇ ಕಾಮಗಾರಿ ಮುಗಿಯಬೇಕಿತ್ತು. ಆದರೆ ಹೆದ್ದಾರಿ ವಿಸ್ತರಣೆಯಿಂದ ಭೂಮಿ ಕಳೆದುಕೊಂಡ ರೈತರು ಪರಿಹಾರ ನೀಡುವಂತೆ ಅಡ್ಡಿಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು ವಾಹನ ಸವಾರರು ನಿತ್ಯವೂ ಹಿಡಿಶಾಪ ಹಾಕುತ್ತಿದ್ದರು.
ಪೊಲೀಸ್ ಕಾವಲು: ಗುರುವಾರ ಬೆಳಿಗ್ಗೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ಆರಂಭಗೊಳಿಸಲಾಯಿತು. ಈ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ರೈತರು ಪರಿಹಾರ ನೀಡುವವರೆಗೆ ಕಾಮಗಾರಿ ಮಾಡದಂತೆ ಪಟ್ಟು ಹಿಡಿದರು. ಕೆಲಹೊತ್ತು ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ಈ ಹೆದ್ದಾರಿ ಕಾಮಗಾರಿಗೆ ಅಡ್ಡಿಯಾಗಿರುವ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸಲು ಕ್ರಮವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು. ಕಟ್ಟಡಗಳನ್ನು ಹಾಗೇ ಬಿಟ್ಟಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ಕಟ್ಟಡ ತೆರವುಗೊಳಿಸುವುದಾದರೆ ಸೂಕ್ತ ಬಂದೋಬಸ್ತ್ ಒದಗಿಸುವುದಾಗಿ ಪಿಐ ಪುಂಡಲಿಕ ಪಟತಾರ್ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಹುನುಗುಂದ ವಿಭಾಗದ ಇಇ ವಿಜಯಕುಮಾರ, ತಹಶೀಲ್ದಾರ್ ಸತ್ಯಮ್ಮ, ಎಇಇ ಕೃಷ್ಣಮೂರ್ತಿ, ಕಂದಾಯ ನಿರೀಕ್ಷಕ ರಾಮಕೃಷ್ಣ ನಾಯಕ, ವಿಇ ಯೇಸಪ್ಪ, ಸಿಬ್ಬಂದಿಗಳಾದ ಅರುಣ್, ವಿಧ್ಯಾ ಪಾಟೀಲ, ಎಸ್.ಪಿ.ಜಾಧವ್ ಇದ್ದರು.
‘ನಾಲ್ಕು ಪಟ್ಟು ಪರಿಹಾರಕ್ಕೆ ಒಂದು ವರ್ಷದ ಬಡ್ಡಿ ಕೊಡುತ್ತೇವೆ’: ಧಾರವಾಡ ವಿಶೇಷ ಭೂಸ್ವಾಧೀನಾಧಿಕಾರಿ ಕ್ಯಾಪ್ಟನ್ ಶ್ರೀನಿವಾಸಗೌಡ ‘ಸರ್ಕಾರದ ನಿಯಮ ಪ್ರಕಾರ ಭೂಮಿ ಕಳೆದುಕೊಂಡ ರೈತರಿಗೆ ಮೂರು ಪಟ್ಟು ಪರಿಹಾರ ನೀಡಲಾಗುತ್ತಿದೆ. ಆದರೆ ವಿಶೇಷ ಕಾಳಜಿ ವಹಿಸಿ ಒಂದು ಪಟ್ಟು ಅಂದರೆ ಒಟ್ಟು ನಾಲ್ಕು ಪಟ್ಟು ಪರಿಹಾರ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಆದರೆ ರೈತರು ಪರಿಹಾರ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ನಾಲ್ಕು ಪಟ್ಟು ಪರಿಹಾರ ಹಣಕ್ಕೆ ಒಂದು ವರ್ಷ ಬಡ್ಡಿ ಹಾಕಿಕೊಡಲಾಗುವುದು. ರೈತರು ಈಗ ಬಿಡುಗಡೆಯಾಗಿರುವ ಪರಿಹಾರ ಪಡೆದುಕೊಂಡು ನಂತರ ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕೋರ್ಟ್‌ಗೆ ಮೊರೆ ಹೋದರೆ ಮತ್ತಷ್ಟು ಪರಿಹಾರ ಸಿಗಬಹುದು. ಭೂಸ್ವಾಧೀನ ಸಂದರ್ಭದಲ್ಲಿ ಎನ್‌ಎ ಆಗಿರುವ ನಿವೇಶನ ಹಾಗೂ ಮನೆ ಕಳೆದುಕೊಂಡಿರುವವರಿಗೆ ಪರಿಹಾರ ನೀಡಲಾಗುತ್ತಿದೆ. ಒಂದು ಇಂಚು ಭೂಮಿ ಪಡೆದುಕೊಂಡರೂ ಸರ್ಕಾರ ಪರಿಹಾರ ನೀಡುತ್ತದೆ’ ಎಂದರು. ‘ನಿಮ್ಮೂರಿನ ರಸ್ತೆಯಲ್ಲಿ ನೀವೇ ಅಡ್ಡಾಡುವುದು. ಅಭಿವೃದ್ಧಿಗೆ ಸಹಕಾರ ನೀಡಿ‘ ಎಂದು ರೈತರಿಗೆ ಮನವಿ ಮಾಡಿ ಮನವೊಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.