ADVERTISEMENT

ರಾಯಚೂರು| ಒನಕೆ ಓಬವ್ವನ ಧೈರ್ಯ, ಸಾಹಸ ಮಹಿಳೆಯರಿಗೆ ಸ್ಫೂರ್ತಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:33 IST
Last Updated 12 ನವೆಂಬರ್ 2025, 6:33 IST
ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವನ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಒನಕೆ ಓಬವ್ವನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು
ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವನ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಒನಕೆ ಓಬವ್ವನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು   

ರಾಯಚೂರು: ‘ವೀರವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ಹೆಣ್ಣು ಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ’ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಹೇಳಿದರು.

ಇಲ್ಲಿಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ, ಮನೆಯಲ್ಲಿನ ಒನಕೆಯನ್ನೇ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಚಂಡಾಡಿ, ಕೋಟೆಯನ್ನು ರಕ್ಷಿಸಿ ವೀರನಾರಿ ಎನ್ನುವ ಬಿರುದು ಪಡೆದುಕೊಂಡರು. ಇಂತಹ ವೀರನಾರಿಯ ಚರಿತ್ರೆಯನ್ನು ಎಲ್ಲೆಡೆ ಪಸರಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ವಿದ್ಯಾರ್ಥಿಗಳು ವೀರ ನಾರಿ ಒನಕೆ ಓಬವ್ವನ ಧೈರ್ಯ ಸಾಹಸವನ್ನು ಮೈಗೂಡಿಸಿಕೊಳ್ಳಬೇಕು‘ ಎಂದು ಸಲಹೆ ನೀಡಿದರು.

ADVERTISEMENT

‘ರಾಯಚೂರು ಜಿಲ್ಲೆ ಅಭಿವೃದ್ಧಿಪಥದಲ್ಲಿದೆ. ಮೈಸೂರು, ಬೆಳಗಾವಿ ಜಿಲ್ಲೆಗಳಲ್ಲಿ ಆಗಿರುವಂತಹ ಬದಲಾವಣೆಗಳು ನಮ್ಮಲ್ಲೂ ಆಗಬೇಕು. ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕು. ಪೂರ್ಣ ಪ್ರಮಾಣದ ಶಿಕ್ಷಣದ ಕೊರತೆ ತಪ್ಪಬೇಕು. ತಾಯಿ ಮತ್ತು ಮಕ್ಕಳು ಎದುರಿಸುತ್ತಿರುವ ರಕ್ತ ಹೀನತೆಯಂತಹ ಸಮಸ್ಯೆಗಳು ತೊಲಗಬೇಕು‘ ಎಂದು ಹೇಳಿದರು.

‘ಈ ಭಾಗದ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಯುಪಿಎಸ್‌ಸಿ, ಕೆಪಿಎಸ್‌ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳಿಗೇರಬೇಕು. ಈ ಭಾಗದಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದು, ವಿದ್ಯಾರ್ಥಿನಿಯರು ಓದಿನಲ್ಲಿ ಮುಂದೆ ಬರಬೇಕು. ಹಾಸ್ಟೆಲ್ ಸೌಕರ್ಯ ಪಡೆದುಕೊಂಡು ವಿದ್ಯಾರ್ಥಿನಿಯರು ಉನ್ನತ ವ್ಯಾಸಾಂಗ ಮಾಡಬೇಕು’ ಎಂದು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ‘ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಯ ಉದ್ದೇಶ ವಿದ್ಯಾರ್ಥಿನಿಯರಿಗೆ ಸ್ಫೂರ್ತಿ ತುಂಬುವುದಾಗಿದೆ’ ಎಂದು ತಿಳಿಸಿದರು.

ದೇವದುರ್ಗ ತಾಲ್ಲೂಕಿನ ಬಸವ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕಿ ಕೆ. ಶಿಲ್ಪಕಲಾ ಬೊಮ್ಮನಾಳ ವಿಶೇಷ ಉಪನ್ಯಾಸ ನೀಡಿದರು.

ರಾಯಚೂರಿನ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಚನ್ನಬಸವ, ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಪವನ ಕುಮಾರ್, ರಾಯಚೂರು ತಹಸೀಲ್ದಾರ್ ಸುರೇಶ್ ವರ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಸಮಾಜದ ಮುಖಂಡರಾದ ವಿನೋದ ಸಾಗರ, ಎಂ.ವಸಂತ, ಅರ್ಚನಾ, ಪ್ರಿಯದರ್ಶಿನಿ, ಲಲಿತಾ ಕೊಂಬಿನ್ ಉಪಸ್ಥಿತರಿದ್ದರು. ಶಿಕ್ಷಕಿ ಯಶೋಧಾ ನಿರೂಪಿಸಿದರು. ಸತ್ಯವತಿ ದೇಶಪಾಂಡೆ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.