ADVERTISEMENT

ರಾಯಚೂರಿನಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ: ಡಿಸಿ ಡಾ.ಬಿ.ಸಿ.ಸತೀಶ್‌

‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ ‘ಎಕ್ಸಾಂ ಮಾಸ್ಟರ್‌ಮೈಂಡ್‌’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 13:19 IST
Last Updated 29 ಸೆಪ್ಟೆಂಬರ್ 2021, 13:19 IST
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಬಳಗದ ‘ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ ‘ಎಕ್ಸಾಂ ಮಾಸ್ಟರ್‌ಮೈಂಡ್‌’ ಡಿಜಿಟಲ್‌ ಪತ್ರಿಕೆಯನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಬುಧವಾರ ಬಿಡುಗಡೆ ಮಾಡಿದರು. ಪತ್ರಿಕಾ ಏಜೆಂಟ್‌ ಬಸಪ್ಪ, ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ನಾಗರಾಜ ಚಿನಗುಂಡಿ, ಕಾಲೇಜಿನ ಪ್ರಾಧ್ಯಾಪಕ ಶಿವರಾಜಪ್ಪ, ಉದ್ಯೋಗ ಮತ್ತು ತರಬೇತಿ ಕೋಶದ ಸಂಚಾಲಕ ಡಾ.ಜೆ.ಎಲ್‌.ಈರಣ್ಣ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಕಾಲೇಜಿನ ಪ್ರಾಂಶುಪಾಲ ಡಾ.ಆರ್‌.ಮಲ್ಲನಗೌಡ ಹಾಗೂ ಪತ್ರಿಕಾ ಪ್ರಸರಣ ಪ್ರತಿನಿಧಿ ಅಮರೇಶ ಇದ್ದರು
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಬಳಗದ ‘ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ ‘ಎಕ್ಸಾಂ ಮಾಸ್ಟರ್‌ಮೈಂಡ್‌’ ಡಿಜಿಟಲ್‌ ಪತ್ರಿಕೆಯನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಬುಧವಾರ ಬಿಡುಗಡೆ ಮಾಡಿದರು. ಪತ್ರಿಕಾ ಏಜೆಂಟ್‌ ಬಸಪ್ಪ, ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ನಾಗರಾಜ ಚಿನಗುಂಡಿ, ಕಾಲೇಜಿನ ಪ್ರಾಧ್ಯಾಪಕ ಶಿವರಾಜಪ್ಪ, ಉದ್ಯೋಗ ಮತ್ತು ತರಬೇತಿ ಕೋಶದ ಸಂಚಾಲಕ ಡಾ.ಜೆ.ಎಲ್‌.ಈರಣ್ಣ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಕಾಲೇಜಿನ ಪ್ರಾಂಶುಪಾಲ ಡಾ.ಆರ್‌.ಮಲ್ಲನಗೌಡ ಹಾಗೂ ಪತ್ರಿಕಾ ಪ್ರಸರಣ ಪ್ರತಿನಿಧಿ ಅಮರೇಶ ಇದ್ದರು   

ರಾಯಚೂರು: ‘ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ತಯಾರಿ ಮಾಡುವ ಈ ಭಾಗದ ವಿದ್ಯಾರ್ಥಿಗಳು ಬಹುತೇಕ ಧಾರವಾಡದಲ್ಲಿ ಹೋಗಿ ಉಳಿದುಕೊಳ್ಳುವುದನ್ನು ನಾನು ನೋಡಿದ್ದೇನೆ. ಆದರೆ ರಾಯಚೂರಿನಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಬೇಕು ಎನ್ನುವುದು ನನ್ನ ಕನಸಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಬಳಗದ ‘ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ ‘ಎಕ್ಸಾಂ ಮಾಸ್ಟರ್‌ಮೈಂಡ್‌’ ಡಿಜಿಟಲ್‌ ಪತ್ರಿಕೆಯನ್ನು ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಕಲಬುರ್ಗಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದು ವ್ಯವಸ್ಥೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಸಾಮಗ್ರಿಗಳನ್ನು ಒದಗಿಸಬೇಕು ಎನ್ನುವ ಪ್ರಸ್ತಾವನೆ ಕೆಕೆಆರ್‌ಡಿಬಿಯಲ್ಲಿದೆ ಎಂದರು.

ADVERTISEMENT

ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿಯನ್ನು ಒಂದು ಸೇವೆ ರೀತಿಯಲ್ಲಿ ಮಾಡುವುದಕ್ಕೆ ಆಸಕ್ತಿ ಇರುವವರಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಾಯ ಒದಗಿಸಲಾಗುತ್ತದೆ. ಜಿಲ್ಲಾಡಳಿತದಿಂದ ನುರಿತ ಮಾನವ ಸಂಪನ್ಮೂಲ ಒದಗಿಸುವುದು ಹಾಗೂ ಇತರೆ ಸಾಮಗ್ರಿಗಳನ್ನು ಒದಗಿಸಬೇಕು ಎನ್ನುವುದು ಯೋಜನೆ ಹಂತದಲ್ಲಿದೆ ಎಂದು ಹೇಳಿದರು.

‘ಇಷ್ಟು ಕಡಿಮೆ ಮೊತ್ತದಲ್ಲಿ ಜ್ಞಾನ ನೀಡುತ್ತಿರುವುದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಧಾರವಾಡದಲ್ಲಿ ಸಾಕಷ್ಟು ಕೋಚಿಂಗ್‌ ಸೆಂಟರ್‌ಗಳಿವೆ. ಸದ್ಯಕ್ಕೆ ತರಬೇತಿ ನೀಡುವುದು ಉದ್ಯಮದ ರೀತಿಯಲ್ಲಿ ನಡೆಯುತ್ತಿದೆ’ ಎಂದರು.

‘ವಿದ್ಯಾರ್ಥಿಗಳಿಗೆ ಅವಕಾಶ ಪದೆಪದೇ ಬರುವುದಿಲ್ಲ. ಸಿಕ್ಕಿರುವ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಬಹುತೇಕ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ಫೋನ್‌ ಇದ್ದೇ ಇದೆ. ಅದರಲ್ಲಿ ಏನು ಬೇಡ ಎಂಬುದೇ ಹೆಚ್ಚಾಗಿರುತ್ತದೆ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನು ಮೊಬೈಲ್‌ ಮೂಲಕವೇ ಆರಂಭಿಸಿದರೆ, ಮುಂಬರುವ ವರ್ಷಗಳಲ್ಲಿ ಅದರಿಂದ ಒಳ್ಳೆಯ ಪ್ರತಿಫಲ ಪಡೆಯುವುದಕ್ಕೆ ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ಮಕ್ಕಳು ಸ್ವಾವಲಂಬಿಗಳಾಗುತ್ತದೆ ಎಂದು ಎಲ್ಲ ಪಾಲಕರದ್ದು ನಿರೀಕ್ಷೆ ಇರುತ್ತದೆ. ಆ ಜವಾಬ್ದಾರಿಯನ್ನು ನಿಭಾಯಿಸಲು ಮುಂದೆ ಬರಬೇಕು. ಮಾದರಿ ವ್ಯಕ್ತಿಗಳಾಗಬೇಕು ಎನ್ನುವ ಕನಸನ್ನು ನನಸು ಮಾಡಿಕೊಳ್ಳಬೇಕು. ತಂದೆ–ತಾಯಿ, ಗುರುಗಳಿಗೆ ಹಾಗೂ ಹುಟ್ಟಿಬೆಳೆದಿರುವ ಸಮಾಜಕ್ಕೆ ಎಂದಿಗೂ ಮೋಸ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

ಕಾಲೇಜು ಜೀವನದಿಂದ ಆರಂಭಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಅಧಿಕಾರಿಯಾದ ತಮ್ಮ ಜೀವನದ ಹಂತಗಳನ್ನು ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್‌.ಮಲ್ಲನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಉನ್ನತ ಹುದ್ದೆಯಲ್ಲಿದ್ದವರು ವಿದ್ಯಾರ್ಥಿಗಳಿಗೆ ನೇರವಾಗಿ ಮಾರ್ಗದರ್ಶನ ಮಾಡಿದ್ದರಿಂದ ಬಹಳ ಪರಿಣಾಮ ಉಂಟಾಗಿದೆ. ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಜಿಲ್ಲಾಧಿಕಾರಿ, ಸಿಇಓ ಪ್ರೇರಣೆಯಾಗಿದ್ದಾರೆ’ ಎಂದರು.

ಕಾಲೇಜಿನ ಉದ್ಯೋಗ ಮತ್ತು ತರಬೇತಿ ಕೋಶದ ಸಂಚಾಲಕ ಡಾ.ಜೆ.ಎಲ್‌.ಈರಣ್ಣ ಸ್ವಾಗತಿಸಿದರು. ‘ಪ್ರಜಾವಾಣಿ’ ‘ಡೆಕ್ಕನ್‌ಹೆರಾಲ್ಡ್‌’ ಪ್ರಸರಣ ವಿಭಾಗದ ಪ್ರತಿನಿಧಿ ಅಮರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಿವರಾಜಪ್ಪ ಅತಿಥಿಯಾಗಿ ಭಾಗವಹಿಸಿದ್ದರು.

ವಿದ್ಯಾರ್ಥಿನಿ ಚೈತ್ರಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ರೇಷ್ಮಾ ನಿರೂಪಿಸಿದರು. ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ನಾಗರಾಜ ಚಿನಗುಂಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.