ADVERTISEMENT

ಸಿಂಧನೂರು: ಮೇ.8 ರಿಂದ 11ರವರೆಗೆ ಸಾರ್ವಜನಿಕ ಕುರಾನ್ ಪ್ರವಚನ

ಮಸ್ಜೀದ್ ಎ ಹುದಾದಲ್ಲಿ ಸ್ವಾಗತ ಸಮಿತಿ ಪ್ರಥಮ ಸಭೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 13:34 IST
Last Updated 20 ಮಾರ್ಚ್ 2025, 13:34 IST
ಸಿಂಧನೂರಿನ ಹಳೆಬಜಾರ್‌ನಲ್ಲಿರುವ ಮಸ್ಜೀದ್ ಎ ಹುದಾದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಾರ್ವಜನಿಕ ಕುರಾನ್ ಪ್ರವಚನ ಸ್ವಾಗತ ಸಮಿತಿ ಸಭೆಯಲ್ಲಿ ಎಂ.ಆರ್.ಬೇಗ್ ಮಾತನಾಡಿದರು
ಸಿಂಧನೂರಿನ ಹಳೆಬಜಾರ್‌ನಲ್ಲಿರುವ ಮಸ್ಜೀದ್ ಎ ಹುದಾದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಾರ್ವಜನಿಕ ಕುರಾನ್ ಪ್ರವಚನ ಸ್ವಾಗತ ಸಮಿತಿ ಸಭೆಯಲ್ಲಿ ಎಂ.ಆರ್.ಬೇಗ್ ಮಾತನಾಡಿದರು    

ಸಿಂಧನೂರು: ‘ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಮೇ.8 ರಿಂದ 11ರವರೆಗೆ ಸಾರ್ವಜನಿಕ ಕುರಾನ್ ಪ್ರವಚನ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರವಚನ ಸಮಿತಿಯ ಕೋಶಾಧ್ಯಕ್ಷ ಎಂ.ಆರ್.ಬೇಗ್ ಹೇಳಿದರು.‌

ಸ್ಥಳೀಯ ಹಳೆಬಜಾರ್‌ನಲ್ಲಿರುವ ಮಸ್ಜೀದ್ ಎ ಹುದಾದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಾರ್ವಜನಿಕ ಕುರಾನ್ ಪ್ರವಚನ ಸ್ವಾಗತ ಸಮಿತಿಯ ಪ್ರಥಮ ಸಭೆಯಲ್ಲಿ ಅವರು ಮಾತನಾಡಿದರು. ‘ಎಲ್ಲ ಧರ್ಮಗಳ ಸಾರ ಒಂದೇ. ಎಲ್ಲವೂ ಮನುಷ್ಯತ್ವ ಹಾಗೂ ಮಾನವೀಯತೆ ಪ್ರತಿಪಾದಿಸಿವೆ. ವೇದಗಳು, ಪುರಾಣಗಳು, ಭಗವದ್ಗೀತೆ, ಕುರಾನ್, ಬೈಬಲ್ ಎಲ್ಲವನ್ನೂ ಸಂತರು, ಮಹಾಂತರು, ದೇವಮಾನವರು ಮಾನವೀಯತೆ ನೆಲಗಟ್ಟಿನಲ್ಲಿ ರಚಿಸಿದ್ದಾರೆ. ಅನ್ಯ ಧರ್ಮ ಹಾಗೂ ಧರ್ಮೀಯರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಕಷ್ಟದಲ್ಲಿರುವವರಿಗೆ ಸಹಾಯ, ಸಹಕಾರ ನೀಡಬೇಕು’ ಎಂದು ಹೇಳಿದರು.

ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಹುಸೇನಸಾಬ್ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕ ಕುರಾನ್ ಪ್ರವಚನವನ್ನು ಸಿಂಧನೂರಿನಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ಎಲ್ಲ ಸಮಾಜದವರ ಸಹಾಯ ಸಹಕಾರ ಇದೆ. ಈ ವರ್ಷ ಎಲ್ಲರೂ ಸೇರಿ ಮತ್ತಷ್ಟು ವಿಶೇಷ ಕಾರ್ಯಕ್ರಮಗಳ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ವಸ್ತು ಪ್ರದರ್ಶನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಆಯೋಜಿಸಲಾಗುವುದು. ಪ್ರವಚನದ ಯಶಸ್ವಿಗಾಗಿ ಈಗಾಗಲೇ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿಯಲ್ಲಿ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಗಣ್ಯರು, ವಿವಿಧ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಪತ್ರಕರ್ತರು ಒಳಗೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಾಯ, ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಂಪಯ್ಯ ಸ್ವಾಮಿ ಸಾಲಿಮಠ ಭಾವೈಕ್ಯ ಗೀತೆ ಹಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಶರಣೇಗೌಡ, ಗೌರವಾಧ್ಯಕ್ಷ ಕೆ.ಜಿಲಾನಿಪಾಶಾ, ಮುಖಂಡರಾದ ಸೈಯ್ಯದ್ ಜಾಫರ್‌ಅಲಿ ಜಾಗೀರದಾರ್, ಕೆ.ಮರಿಯಪ್ಪ, ಎನ್.ಶಿವನಗೌಡ, ಅಲ್ಲಮಪ್ರಭು ಪೂಜಾರ್, ಸ್ವಾಗತ ಸಮಿತಿಯ ಸದಸ್ಯರಾದ ಎಂ.ಡಿ.ನದೀಮಮುಲ್ಲಾ, ಪ್ರಹ್ಲಾದ ಗುಡಿ ವಕೀಲ, ಸೈಯ್ಯದ್ ಹಾರೂನ್‍ಪಾಶಾ ಜಾಗಿರದಾರ್, ಆಬೀದ್ ಖಾದ್ರಿ, ಶಫ್ಫುವುಲ್ಲಾ ಖಾನ್, ನಾಗರಾಜ ಸಜ್ಜನ, ಹುಸೇನಪ್ಪ ಅಮರಾಪುರ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.