ರಾಯಚೂರು: ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮೂರು ಕಡೆ ಹಸುಗೂಸುಗಳು ಪತ್ತೆಯಾದ ನಂತರ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕ ಜಿಲ್ಲೆಯ ವಿವಿಧೆಡೆ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ನಿರ್ಧರಿಸಿದೆ.
ಗ್ರಾಮ ಮಟ್ಟದವರೆಗೂ ಜನಜಾಗೃತಿ ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲು ಆರಂಭಿಸಿದೆ. ನರೇಗಾ ಕಾರ್ಮಿಕರನ್ನು ಜಾಗೃತಿಯಲ್ಲಿ ತೊಡಗಿಸಿಕೊಳ್ಳಲು ಶುರು ಮಾಡಿದೆ.
ರಾಯಚೂರು ತಾಲ್ಲೂಕಿನ ಕಲ್ಮಲಾದಲ್ಲಿ ಕಾಲುವೆ ಪಕ್ಕದಲ್ಲಿ, ದೇವದುರ್ಗ ತಾಲ್ಲೂಕಿನ ಗೋಪಳಾಪುರದ ಹಳ್ಳದ ದಂಡೆ ಹಾಗೂ ಮಾನ್ವಿ ಪಟ್ಟಣದ ಕಸದ ತೊಟ್ಟಿಯಲ್ಲಿ ನವಾಜಾತ ಶಿಶುಗಳು ಪತ್ತೆಯಾಗಿದ್ದವು. ಮಾನ್ವಿಯಲ್ಲಿ ದೊರೆತ ಶಿಶು ಮೃತಪಟ್ಟಿದೆ. ಕಲ್ಮಲಾ ಹಾಗೂ ಗೋಪಳಾಪುರದಲ್ಲಿ ದೊರೆತ ಶಿಶುಗಳಿಗೆ ರಿಮ್ಸ್‌ನಲ್ಲಿ ಚಿಕಿತ್ಸೆ ನೀಡಿ ಶಿಶುಪಾಲನಾ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.
‘ಸಾರ್ವಜನಿಕರು ತಮಗೆ ಜನಿಸಿದ ನವಜಾತ ಶಿಶು ಬೇಡವಾದಲ್ಲಿ ನೇರವಾಗಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ನಿತೀಶ್ ಮನವಿ ಮಾಡಿದ್ದಾರೆ.
‘ದತ್ತು ಸಂಸ್ಥೆಗೆ ದಾಖಲು ಮಾಡಿದರೆ ಮಗುವಿನ ತಾಯಿ ಅಥವಾ ಪೋಷಕರನ್ನು ಯಾವುದೇ ವಿಚಾರಣೆಗೆ ಒಳಪಡಿಸುವುದಿಲ್ಲ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ಮಕ್ಕಳನ್ನು ಕಸದ ಬುಟ್ಟಿ, ರಸ್ತೆ ಬದಿ ಅಥವಾ ತಿಪ್ಪೆಯಲ್ಲಿ ಎಸೆಯಬಾರದು’ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ರಾಯಚೂರಿನ ಮಾವಿನಕೆರೆ ರಸ್ತೆಯಲ್ಲಿರುವ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಕಚೇರಿ ಮೊದಲ ಮಹಡಿ ಹಾಗೂ ರಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ತೊಟ್ಟಿಲು ಇಡಲಾಗಿದೆ. ಅನೈತಿಕ ಸಂಬಂಧದಿಂದ ಜನಿಸಿದ ಅಥವಾ ತಾಯಿ ತನಗೆ ಬೇಡವಾದ ಮಗುವನ್ನು ತೊಟ್ಟಿಲಲ್ಲಿ ಹಾಕಲು ವ್ಯವಸ್ಥೆ ಮಾಡಲಾಗಿದೆ.
ಯಾರೂಬ್ಬರೂ ನವಜಾತ ಶಿಶುಗಳನ್ನು ಕಸದ ತೊಟ್ಟಿ, ಹಳ್ಳಕೊಳ್ಳಗಳ ಪೊದೆಗಳಲ್ಲಿ ಎಸೆದು ಹೋಗಬಾರದು ಎನ್ನುವ ಉದ್ದೇಶದಿಂದ ಶಿಶು ಅಭಿವೃದ್ಧಿ ಅಧಿಕಾರಿಗಳು ತೊಟ್ಟಿಲುಗಳ ವ್ಯವಸ್ಥೆ ಮಾಡಿದ್ದಾರೆ. ಕೇಂದ್ರ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲೂ ತೊಟ್ಟಿಲುಗಳನ್ನು ಇಡಬೇಕು ಎನ್ನುವ ಬೇಡಿಕೆ ಇದ್ದರೂ ದುರ್ಬಳಕೆಯಾಗುವ ಕಾರಣಕ್ಕೆ ಇಟ್ಟಿಲ್ಲ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ.
ಒಂದು ವರ್ಷದಲ್ಲಿ ನಾಲ್ಕು ಮಕ್ಕಳ ದತ್ತು
ಕಳೆದ ಒಂದು ವರ್ಷದಲ್ಲಿ ನಾಲ್ಕು ಮಕ್ಕಳನ್ನು ದತ್ತು ನೀಡಲಾಗಿದೆ. ಕೇರಳದ ದಂಪತಿ ಶಿವಮೊಗ್ಗ ಬೆಂಗಳೂರು ಹಾಗೂ ಮಂಡ್ಯದ ದಂಪತಿಗೆ ತಲಾ ಒಂದು ಮಗು ದತ್ತು ಕೊಡಲಾಗಿದೆ. ಪ್ರಸ್ತುತ ಒಂದು ಮಗುವನ್ನು ಸಿಂಗಾಪುರದ ಅನಿವಾಸಿ ಭಾರತೀಯ ದಂಪತಿಗೆ ದತ್ತು ನೀಡಲು ಕ್ರಮ ವಹಿಸಲಾಗಿದೆ. ಯಾವುದೇ ಸಾರ್ವಜನಿಕರು ತಮಗೆ ಜನಿಸಿದ ನವಜಾತ ಮಗು ಯಾವುದೇ ಕಾರಣದಿಂದ ಬೇಡವಾಗಿದ್ದಲ್ಲಿ ಅಂತಹ ಮಕ್ಕಳನ್ನು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಒಪ್ಪಿಸಬಹುದು. ಎಲ್ಲೆಲ್ಲೋ ಬಿಸಾಕಿ ನವಜಾತ ಶಿಶುವಿನ ಸಾವಿಗೆ ಕಾರಣ ಆಗಬಾರದು ಎಂದು ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿ ಅಮರೇಶ ಹಾವಿನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.