ADVERTISEMENT

ಮುಂಗಾರು ಬೀಜ ದಿನೋತ್ಸವ: ಕೀಟಗಳ ಸಂತಾನೋತ್ಪತ್ತಿ ನಿಯಂತ್ರಿಸುವ ವಿಶೇಷ ಪೇಸ್ಟ್

ಬೀಜ ದಿನೋತ್ಸವ: ಭರಪೂರ ಮಾಹಿತಿ ಪಡೆದ ರೈತರು

ಚಂದ್ರಕಾಂತ ಮಸಾನಿ
Published 26 ಮೇ 2025, 5:33 IST
Last Updated 26 ಮೇ 2025, 5:33 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮದಲ್ಲಿ ರೈತರಿಗೆ ಹತ್ತಿ ಬೆಳೆ ಕೀಟ ನಿಯಂತ್ರಣದ ಪೇಸ್ಟ್‌ನ ಮಾಹಿತಿ ನೀಡಿದ ಕೀಟಶಾಸ್ತ್ರ ವಿಭಾಗದ ಎ.ಜಿ. ಶ್ರೀನಿವಾಸ ಹಾಗೂ ಪ್ರಾಧ್ಯಾಪಕರು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮದಲ್ಲಿ ರೈತರಿಗೆ ಹತ್ತಿ ಬೆಳೆ ಕೀಟ ನಿಯಂತ್ರಣದ ಪೇಸ್ಟ್‌ನ ಮಾಹಿತಿ ನೀಡಿದ ಕೀಟಶಾಸ್ತ್ರ ವಿಭಾಗದ ಎ.ಜಿ. ಶ್ರೀನಿವಾಸ ಹಾಗೂ ಪ್ರಾಧ್ಯಾಪಕರು   

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮ ರೈತರಿಗೆ ಭರಪೂರ ಮಾಹಿತಿ ಒದಗಿಸಿತು.

ಹತ್ತಿ ಬೆಳೆಗೆ ತಗಲುವ ಗುಲಾಬಿ ಕಾಯಿಕೊರಕ ಕೀಡೆಗಳ ನಿಯಂತ್ರಣದ ಪೇಸ್ಟ್, ಮೋಹಕ ಬಲೆ, ಸೌರಶಕ್ತಿ ಫಲಕದ ನೆರವಿನಿಂದ ಕ್ರಿಮಿನಾಶಕ ಸಿಂಪಡಣೆ, ಹೊಸ ತೊಗರಿ ತಳಿಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಂಸ್ಕರಿತ ಶೇಂಗಾ, ಕೊಬ್ಬರಿ ಎಣ್ಣೆ, ಅನುಪಯುಕ್ತ ರೇಷ್ಮೆ ಗೂಡಿನಿಂದ ತಯಾರಿಸಿದ ಹೂಗುಚ್ಛಗಳು ಬೀಜ ದಿನೋತ್ಸವದಲ್ಲಿ ರೈತರ ಗಮನ ಸೆಳೆದವು.

ಹತ್ತಿ ಬೆಳೆಯಲ್ಲಿ ಕೀಟ ನಿಯಂತ್ರಣ: ‘ಹತ್ತಿ ಗಿಡದ ಮೇಲ್ಭಾಗದಲ್ಲಿ ಒಂದು ರೆಮಿಟ್–ಪಿಬಿಡಬ್ಲ್ಯೂ ಪೇಸ್ಟ್‌ ಮಾಡಿ ಕೀಟಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಈ ಮೂಲಕ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ’ ಎಂದು ಕೀಟಶಾಸ್ತ್ರ ವಿಭಾಗದ ಎ.ಜಿ. ಶ್ರೀನಿವಾಸ ಮಾಹಿತಿ ನೀಡಿದರು.

ADVERTISEMENT

‘ಪೇಸ್ಟ್‌ ಹೆಣ್ಣು ಕೀಟದಂತೆ ಗಂಧ ಹೊರ ಸೂಸುತ್ತದೆ. ಗಂಡು ಕೀಟಗಳು ಆಕರ್ಷಣೆ ಒಳಗಾಗಿ ಪೇಸ್ಟ್‌ ಮೇಲೆ ಬಂದು ಕೂಡುತ್ತವೆ. ಪೇಸ್ಟ್‌ ಕೀಟದ ಕಾಲಿಗೆ ಮೆತ್ತಿಕೊಂಡ ನಂತರ ಇತರ ಗಂಡು ಕೀಟಗಳು ಅವುಗಳ ಬೆನ್ನಟ್ಟುತ್ತುವೆ. ಎಲ್ಲ ಹುಳುಗಳು ಗಂಡೇ ಆಗಿರುವ ಕಾರಣ ಗಂಡು ಹೆಣ್ಣಿನ ಮಿಲನ ಸಾಧ್ಯವಾಗುವುದಿಲ್ಲ. ಹೀಗಾಗಿ ಸಂತಾನೋತ್ಪತ್ತಿ ಆಗುವುದಿಲ್ಲ. ಒಂದೂವರೆ ದಿನದಲ್ಲೇ ಕೀಟಗಳು ಸಾಯುತ್ತವೆ’ ಎಂದು ತಿಳಿಸಿದರು.

‘ಒಂದು ಎಕರೆಗೆ ಒಂದು ಟ್ಯೂಬ್‌ ಬಳಸಬೇಕು. ಒಂದು ಟ್ಯೂಬ್ ಬೆಲೆ ₹1,200 ಇದೆ. ನಾಲ್ಕು ಬಾರಿ ಬಳಸಿದರೆ ₹4,800 ಹಾಗೂ ಕೂಲಿ ಆಳಿಗೆ ₹ 1,000 ಸೇರಿ ₹5,800 ಖರ್ಚಾಗುತ್ತದೆ. ಇದರಿಂದ ಕೀಟಗಳು ನಿಯಂತ್ರಣಕ್ಕೆ ಬಂದು ಉತ್ಪಾದನೆ ಹೆಚ್ಚಾಗುತ್ತದೆ. ಗರಿಷ್ಠ ಆದಾಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

ಸೋಲಾರ್‌ ಸ್ಪ್ರೇಯರ್: ಬೀಜ ದಿನೋತ್ಸವವದಲ್ಲಿ ವ್ಯಕ್ತಿಯೊಬ್ಬರು ಸೋಲಾರ್‌ ಸ್ಪ್ರೇಯರ್ ಬೆನ್ನಿಗೆ ಹಾಕಿಕೊಂಡು ಕ್ರಿಮಿನಾಶಕ ಸಿಂಪಡಿಸುವಿಕೆಯ ಪ್ರಾತ್ಯಕ್ಷಿಕೆ ನೀಡುವ ಮೂಲಕ ಗಮನ ಸೆಳೆದರು.

ರೈತರು ಬೆನ್ನಿಗೆ ಗರಿಷ್ಠ ಲೀಟರ್‌ ಟ್ಯಾಂಕ್‌ ಕಟ್ಟಿಕೊಂಡು ಕ್ರಿಮಿನಾಶಕ ಸಿಂಪಡಿಸಬಹುದಾಗಿದೆ. ಟ್ಯಾಂಕ್‌ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದೆ. ಅದು ಬಿಸಿಲಲ್ಲಿ ರೈತನಿಗೆ ರಕ್ಷಣೆ ಕೊಡಲಿದೆ. ಬಟನ್‌ ಆನ್‌ ಮಾಡಿ ನೇರವಾಗಿ ಬೆಳೆಗಳಿಗೆ ಸುಲಭವಾಗಿ ಹಾಗೂ ದೂರದವರೆಗೆ ಕ್ರಿಮಿನಾಶಕ ಸಿಂಪಡಣೆ ಮಾಡುವುದನ್ನು ವಿವರಿಸಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ರೈತರಿಗೆ ತೊಗರಿ ತಳಿಗಳ ಮಾಹಿತಿ ನೀಡಿದರು
ಬೀಜ ದಿನೋತ್ಸವವದಲ್ಲಿ ವ್ಯಕ್ತಿಯೊಬ್ಬರು ಸೋಲಾರ್‌ ಸ್ಪ್ರೇಯರ್ ಬೆನ್ನಿಗೆ ಹಾಕಿಕೊಂಡು ಕ್ರಿಮಿನಾಶಕ ಸಿಂಪಡಿಸುವಿಕೆಯ ಪ್ರಾತ್ಯಕ್ಷಿಕೆ ನೀಡುವ ಮೂಲಕ ಗಮನ ಸೆಳೆದರು
ರೇಷ್ಮೆ ವಿಭಾಗದ ವಿದ್ಯಾರ್ಥಿಗಳು ನಿರುಪಯುಕ್ತ ರೇಷ್ಮೆ ಗೂಡುಗಳಿಂದ ತಯಾರಿಸಿದ ಹೂಗುಚ್ಛಗಳು
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಿದ್ಧವಾದ ಪರಿಶುದ್ಧವಾದ ಶೇಂಗಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ

ಅನುಪಯುಕ್ತ ರೇಷ್ಮೆ ಗೂಡಿನ ಹೂಗುಚ್ಛ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ರೇಷ್ಮೆ ವಿಭಾಗದ ಸಿಬ್ಬಂದಿ ನಿರುಪಯುಕ್ತ ರೇಷ್ಮೆ ಗೂಡುಗಳ ಮೌಲ್ಯವರ್ಧನೆ ಮಾಡಿ ರೇಷ್ಮೆ ಬೆಳೆಗಾರರ ಆದಾಯವನ್ನು ಹೇಗೆ ಮೂರು ಪಟ್ಟು ಮಾಡಲು ಸಾಧ್ಯ ಎನ್ನುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಿದರು. ಗೂಡುಗಳನ್ನು ಬಣ್ಣಗಳಲ್ಲಿ ಅದ್ದಿ ಹೂವಿನ ರೂಪ ನೀಡಿದ್ದರು. ಗೂಡುಗಳನ್ನು ಪುಷ್ಪಗುಚ್ಛಗಳನ್ನಾಗಿ ಪರಿವರ್ತಿಸಿದ್ದರು. ಹೂವಿನ ಮಾಲೆಗಳನ್ನು ತಯಾರಿಸಿ ಮಾರಾಟಕ್ಕೆ ಅಣಿಗೊಳಿಸಿದ್ದರು.

ಹವಾಮಾನ ಮಾಹಿತಿಗೆ ಕ್ಯೂಆರ್‌ ಕೋಡ್‌

ಪ್ರದರ್ಶನ ಮಳಿಗೆಯಲ್ಲಿ ಜಿಲ್ಲೆಯ ಹವಾಮಾನ ಮಾಹಿತಿ ನೀಡಲು ತಾಲ್ಲೂಕುವಾರು ಕ್ಯೂಆರ್ ಕೋಡ್‌ ಸಿದ್ಧಪಡಿಸಿ ರೈತರಿಗೆ ಮಾಹಿತಿ ಒದಗಿಸಲಾಯಿತು. ವಾಟ್ಸ್‌ಆ್ಯಪ್‌ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿದರೆ ಸಾಕು ರೈತರಿಗೆ ಅವರ ತಾಲ್ಲೂಕಿನ ಹವಾಮಾನ ಮಾಹಿತಿ ಒದಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಲಾಯಿತು. ಅಲ್ಲಿ ಫಲಕಗಳಲ್ಲಿ ತಾಲ್ಲೂಕುವಾರು ಕ್ಯೂಆರ್‌ ಕೋಡ್‌ಗಳನ್ನು ಅಳವಡಿಸಲಾಗಿತ್ತು. ‘ರೈತರ ಅನುಕೂಲಕ್ಕಾಗಿ ತಾಲ್ಲೂಕುವಾರು ಕ್ಯೂರ್‌ ಕೋಡ್‌ ರಚಿಸಿ ಮಾಹಿತಿ ಕೊಡಲಾಗುತ್ತಿದೆ’ ಎಂದು ‌ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಶಾಂತಪ್ಪ ತಿಳಿಸಿದರು. ವಿಭಾಗದ ವಿಜ್ಞಾನಿಗಳು ಬೀಜ ಘಟಕ ಕೃಷಿ ವಿಜ್ಞಾನ ಕೇಂದ್ರ ಮುಖ್ಯ ಕೃಷಿ ಸಂಶೋಧನಾ ಕೇಂದ್ರ ಸಾವಯವ ಕೃಷಿ ಸಂಸ್ಥೆ ಕೃಷಿ ಯಂತ್ರೋಪಕರಣ ಆಹಾರ ಮತ್ತು ಸಂಸ್ಕರಣೆ ಕೃಷಿಯಲ್ಲಿ ನವೀಕರಿಸಬಹುದಾದ ಇಂಧನಗಳ ಬಳಕೆ ವಿವಿಧ ಸುಧಾರಿತ ಬೀಜಗಳು ಜೈವಿಕ ಪೀಡೆನಾಶಕಗಳು ತೋಟಗಾರಿಕೆ ಬೆಳೆಗಳು ಮತ್ತು ಇತರೆ ತಂತ್ರಜ್ಞಾನಗಳ ಮಾಹಿತಿ ಒದಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.