ADVERTISEMENT

ರಂಜಾನ್ | ಲಾಕ್‌ಡೌನ್‌ನಿಂದ ರಾಯಚೂರಿನಲ್ಲಿ ತಗ್ಗಿದ ಹಲೀಮ್‌ ವ್ಯಾಪಾರ

ಬಾವಸಲಿ
Published 17 ಮೇ 2020, 19:30 IST
Last Updated 17 ಮೇ 2020, 19:30 IST
ರಾಯಚೂರಿನ ತೀನ್‌ ಕಂದಿಲ್‌ನಲ್ಲಿರುವ ಅಜ್ಮೀರ್‌ ಹೋಟೆಲ್‌ನಲ್ಲಿ ಹಲೀಮ್ ಪಾರ್ಸಲ್‌ ಕೊಡುವ ವ್ಯವಸ್ಥೆ ಇದೆ
ರಾಯಚೂರಿನ ತೀನ್‌ ಕಂದಿಲ್‌ನಲ್ಲಿರುವ ಅಜ್ಮೀರ್‌ ಹೋಟೆಲ್‌ನಲ್ಲಿ ಹಲೀಮ್ ಪಾರ್ಸಲ್‌ ಕೊಡುವ ವ್ಯವಸ್ಥೆ ಇದೆ   

ರಾಯಚೂರು: ರಂಜಾನ್‌ ಮಾಸದಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ವೃತ ಆಚರಣೆ ಮಾಡಬೇಕಿರುವುದರಿಂದ ಪೌಷ್ಟಿಕಾಂಶ ಆಹಾರ, ಖಾದ್ಯಗಳನ್ನು ಹೆಚ್ಚು ಸೇವಿಸುತ್ತಾರೆ. ಅದರಲ್ಲೂ ಹಲೀಮ್‌ ಪ್ರತಿವರ್ಷ ಭರ್ಜರಿ ವ್ಯಾಪಾರ ಇರುತ್ತಿತ್ತು. ಲಾಕ್‌ಡೌನ್‌ ಕಾರಣದಿಂದ ಈ ಸಲ ತಯಾರಿಕೆಯೂ ಕಡಿಮೆ, ಬೇಡಿಕೆಯೂ ಇಲ್ಲ.

ಗೋದಿಯ ಜೊತೆ ಮಾಂಸದಿಂದ ತಯಾರಿಸುವ ಖಾದ್ಯ ವಿಶೇಷ ಖಾದ್ಯ ಹಲೀಮ್‌. ಉಪವಾಸ ಇದ್ದವರು, ಇಲ್ಲದವರು ಕೂಡಾ ಇಷ್ಟಪಟ್ಟಡು ರಂಜಾನ್‌ ತಿಂಗಳಲ್ಲಿ ಸೇವಿಸುತ್ತಿದ್ದರು. ನಗರದ ಹಲವಾರು ಬಿರಿಯಾನಿ ಹೋಟೆಲ್‌ಗಳಲ್ಲಿ ಹಲಿಮ್ ಉಣಬಡಿಸಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಲಾಕ್‌ಡೌನ್ ಹೊಟೆಲ್ ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ.

ನಗರದ ತೀನ್ ಖಂದೀಲ್ ರಸ್ತೆ, ಸ್ಟೇಶನ್ ರಸ್ತೆ, ಶಮ್ಸ್ ಆಲಂ ದರ್ಗಾ ಬಳಿ ಸೇರಿದಂತೆ 12ಕ್ಕೂ ಹೆಚ್ಚು ಪ್ರತಿಷ್ಠಿತ ಬಿರಿಯಾನಿ ಹೊಟೆಲ್‌ಗಳಲ್ಲಿ ಸಂಜೆ ಉಪವಾಸ ಬಿಡುವ ವೇಳೆಯಿಂದ ರಾತ್ರಿ 9 ಗಂಟೆಯವರೆಗೆ ಹಲೀಮ್ ತಯಾರಿಸಿ ಉಣ ಬಡಿಸುತ್ತಿದ್ದರು. ನಗರದಲ್ಲಿ ಹೈದರಾಬಾದ್ ಹಲೀಮ್‌ಗೆ ಎಲ್ಲಿಲ್ಲದ ಬೇಡಿಕೆ. ಹಲವಾರು ಹೋಟೆಲ್ ಮಾಲೀಕರು ಹೈದರಾಬಾಸ್‌ನಿಂದ ಹಲಿಮ್ ಮಾಡುವವರನ್ನು ಕರೆಸಿ ತಿಂಗಳ ಪೂರ್ತಿ ಇಲ್ಲಿಯೇ ವ್ಯವಸ್ಥೆ ಮಾಡಿ ಹಲೀಮ್ ತಯಾರಿಸಿ ಮಾರಾಟ ಮಾಡುತ್ತಿದ್ದರು.

ADVERTISEMENT

ತಯಾರಿಸುವ ವಿಧಾನ: ಗೋಧಿ, ಬಾರ್ಲಿ, ಮಾಂಸ, ಬೇಳೆಗಳು ಮತ್ತು ಸಂಬಾರ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಈ ಭಕ್ಷ್ಯವನ್ನು ಏಳರಿಂದ ಎಂಟು ಗಂಟೆಗಳವರೆಗೆ ನಿಧಾನವಾಗಿ ಬೇಯಿಸಲಾಗುತ್ತದೆ. ಪರಿಣಾಮವಾಗಿ ಪೇಸ್ಟ್‌ನಂಥ ಸ್ನಿಗ್ಧತೆ ಬರುತ್ತದೆ ಮತ್ತು ಸಂಬಾರ ಪದಾರ್ಥಗಳು, ಮಾಂಸ, ಬಾರ್ಲಿ ಮತ್ತು ಗೋಧಿಯ ಪರಿಮಳಗಳು ಚೆನ್ನಾಗಿ ಒಂದುಗೂಡಿ ರುಚಿಕಟ್ಟಾಗಿ ತಯಾರಾಗುತ್ತದೆ. ಹಲೀಮ್ ಅನ್ನು ಪುದೀನಾ, ನಿಂಬೆ ರಸ, ಕೊತ್ತಂಬರಿ, ಕರಿದ ಈರುಳ್ಳಿ ಹಾಕಿ ತಿನ್ನಲಾಗುತ್ತೆ.

ಹೋಟೆಲ್‌ಗಳಲ್ಲಿ ಪಾರ್ಸಲ್‌ ಮಾತ್ರ ನಿಡಬಹುದು ಎಂಬ ಆದೇಶ ನೀಡಲಾಗಿದೆ. ಹೀಗಾಗಿ ರಾಯಚೂರಿನ ರೈಲ್ವೆ ನಿಲ್ದಾಣ ಎದುರಿನ ಸಾದಿಕ್‌ ಹೋಟೆಲ್, ತೀನ್‌ ಕಂದಿಲ್‌ ಹತ್ತಿರ ಅಜ್ಮೀರ್‌ ಹೋಟೆಲ್, ಎಸ್‌ಎನ್‌ಟಿ ಥೇಟರ್‌ ಬಳಿಯ ಮುನಿರ್‌ ಹೋಟೆಲ್‌‌ ಹಾಗೂ ಅಭಿರುಚಿ ಹೋಟೆಲ್‌ಗಳಲ್ಲಿ ಹಲೀಮ್ ತಯಾರಿಸಿ ಪಾರ್ಸಲ್‌ ನೀಡಲಾಗುತ್ತಿದೆ. ಆದರೆ, ಗ್ರಾಹಕರ ಸಂಖ್ಯೆ ತೀರ ಕಡಿಮೆ. ಪ್ರತಿವರ್ಷ ಸಂಜೆ ವೇಳೆ ಹಲೀಮ್‌ಗಾಗಿ ಜನ ಜಂಗುಳಿ ಇರುತ್ತಿತ್ತು.

‘ಪ್ರತಿವರ್ಷ ರಂಜಾನ್ ತಿಂಗಳಲ್ಲಿ 35 ಕೆಜಿ ಹಲಿಮ್ ತಯಾರಿಸಲಾಗುತ್ತಿತ್ತು. ಆದರೆ, ಈಗ 6 ಕೆಜಿ ತಯಾರಿಸಲಾಗುತ್ತಿದೆ. ಲಾಕ್ ಡೌನ್‌ನಿಂದ ಕೆಂಗೆಟ್ಟಿದ್ದ ನಮಗೆ ಹೋಟೆಲ್ ತೆರೆಯಲು ಈಗಷ್ಟೆ ಅವಕಾಶವಾಗಿದೆ. ಕೇವಲ ಪಾರ್ಸಲ್‌ ಕೊಡುವ ವ್ಯವಸ್ಥೆ ಇದೆ. ಅದರೆ ಸುತ್ತಮುತ್ತ ಬ್ಯಾರಿಕೇಡ್ ಹಾಕಿದ್ದು ಜನ ಹಲೀಮ್‌ಗಾಗಿ ತಾಪತ್ರಯ ಪಟ್ಟು ಬರುತ್ತಿಲ್ಲ. ಈ ಬಾರಿ ಕೊರೊನಾ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಹಲೀಮ್ ತಿನ್ನುವ ಸ್ಥಿತಿಯಲ್ಲಿ ಜನರಿಲ್ಲ. ಹೋಟೆಲ್ ಬಂದ್ ಇರಬಾರದು ಎಂಬ ಕಾರಣಕ್ಕೆ ಹಲೀಮ್ ಬಿರಿಯಾನಿ ಮಾರಾಟ ಮಾಡುತ್ತಿದ್ದೇವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೇವಲ ಶೇ 25 ರಷ್ಟು ಮಾತ್ರ ವ್ಯಾಪಾರವಿದೆ’ ಎಂದು ಅಜ್ಮೀರ್ ಹೋಟೆಲ್ ಸಹ ಮಾಲೀಕ ನೂರ್ ಉಲ್ ಹಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.