ADVERTISEMENT

ಶಕ್ತಿನಗರ | ಅರ್ಧಕ್ಕೆ ಸ್ಥಗಿತಗೊಂಡ ರಸ್ತೆ ಕಾಮಗಾರಿ: ಪ್ರಯಾಸದ ಸಂಚಾರ

ಉಮಾಪತಿ ಬಿ.ರಾಮೋಜಿ
Published 2 ಡಿಸೆಂಬರ್ 2024, 6:21 IST
Last Updated 2 ಡಿಸೆಂಬರ್ 2024, 6:21 IST
ಶಕ್ತನಗರ ಬಳಿಯ ಮರ್ಚೆಟಹಾಳ ಗ್ರಾಮದಿಂದ ಉಡಮಗಲ್ ಗ್ರಾಮಕ್ಕೆ ತೆರಳುವ ರಸ್ತೆ ಹಾಳಾಗಿರುವುದು
ಶಕ್ತನಗರ ಬಳಿಯ ಮರ್ಚೆಟಹಾಳ ಗ್ರಾಮದಿಂದ ಉಡಮಗಲ್ ಗ್ರಾಮಕ್ಕೆ ತೆರಳುವ ರಸ್ತೆ ಹಾಳಾಗಿರುವುದು   

ಶಕ್ತಿನಗರ: ರಾಯಚೂರು ತಾಲ್ಲೂಕಿನ ಮರ್ಚೆಟಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಚೆಟಹಾಳ ಗ್ರಾಮದಿಂದ ಉಡುಮಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಎರಡು ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕೆ ಜಲ್ಲಿಕಲ್ಲು ಹಾಕಿ ಹಾಗೆ ಬಿಟ್ಟ ಕಾರಣ ಶಾಲಾ ಮಕ್ಕಳು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಗ್ರಾಮದ ತಿಮ್ಮಪ್ಪ ತಾತನವರ ಮಠದಿಂದ ತಿಮ್ಮಪ್ಪ ಸಾಹುಕಾರರ ಹೊಲದವರೆಗೆ ಸುಮಾರು ಎರಡು ಕಿ.ಮೀವರೆಗಿನ ಮುಖ್ಯರಸ್ತೆಗೆ ಜಲ್ಲಿಕಲ್ಲು ಹಾಕಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ.

ADVERTISEMENT

ಕಾರಣಾಂತರಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಜಲ್ಲಿಕಲ್ಲುಗಳಲ್ಲಿ ವಾಹನಗಳು ತೆರಳಿದಾಗ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಶಾಲೆಯ ಮಕ್ಕಳಿಗೆ, ಜಮೀನಿಗೆ ತೆರಳುವ ಸಾರ್ವಜನಿಕರಿಗೆ ಕಲ್ಲು ಹೊಡೆದು ಅಪಘಾತಗಳು ಸಂಭವಿಸಿವೆ.

ಗ್ರಾಮದಿಂದ 500 ಮೀಟರ್ ದೂರದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಪ್ರತಿದಿನ ನೂರಾರು ಮಕ್ಕಳು ಈ ರಸ್ತೆ ಮೂಲಕ ತೆರಳುತ್ತಾರೆ. ಹತ್ತಿ ಬಿಡಿಸುವ ಕಾಲ ಇದಾಗಿರುವುದರಿಂದ ನಿತ್ಯ ನೂರಾರು ಆಂಧ್ರಪ್ರದೇಶ ಮತ್ತು ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಕೂಲಿ ಕಾರ್ಮಿಕರನ್ನು ಹೊತ್ತು ಟ್ರ್ಯಾಕ್ಟರ್, ಟಾಟಾ ಏಸ್ ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತವೆ.

ಮುಖ್ಯರಸ್ತೆ ಹಾಳಾಗಿರುವ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಶಾಸಕ ಬಸನಗೌಡ ದದ್ದಲ್ ಅವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಭೀಮರಾಯ ನಾಯಕ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.