
ಕವಿತಾಳ: ಸಮೀಪದ ತೋರಣದಿನ್ನಿ ಗ್ರಾಮದಲ್ಲಿ ನಡೆದ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಅಂಗವಾಗಿ ಭಾನುವಾರ ಆಯೋಜಿಸಿದ್ದ ರೊಟ್ಟಿ ಜಾತ್ರೆಯಲ್ಲಿ ಗ್ರಾಮದ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಅ.29ರಂದು ನಡೆಯುವ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಪುರಾಣ ಪ್ರವಚನ ನಡೆಯುತ್ತಿದೆ. ಪುರಾಣ ಪ್ರವಚನದಲ್ಲಿನ ಸಾರಾಂಶದಂತೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಉಣಬಡಿಸಲು ಗ್ರಾಮದ 400ಕ್ಕೂ ಹೆಚ್ಚಿನ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಅಂದಾಜು 2.5 ಸಾವಿರ ರೊಟ್ಟಿಯನ್ನು ತಮ್ಮ ಮನೆಯಲ್ಲಿ ತಯಾರಿಸಿಕೊಂಡು ಬುತ್ತಿ ರೂಪದಲ್ಲಿ ತೆಗೆದಕೊಂಡು ಬಂದು ಸಮರ್ಪಿಸಿದರು.
ಬಣ್ಣ ಬಣ್ಣದ ಸೀರೆಯುಟ್ಟ ಮಹಿಳೆಯರು ಮತ್ತು ಮಕ್ಕಳು ತಲೆ ಮೇಲೆ ರೊಟ್ಟಿ ಬುತ್ತಿ ಹೊತ್ತು ಕಳಸಗಿತ್ತಿಯೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು.
‘ದಾಸೋಹದ ಮಹತ್ವ ಸಾರುವ ಪುರಾಣ ಪ್ರವಚನದಲ್ಲಿನ ಸಾರಾಂಶದಂತೆ ನಿತ್ಯ ವಿಶೇಷ ಚಟುವಟಿಕೆಗಳು ನಡೆಯುತ್ತಿವೆ, ರೊಟ್ಟಿ ಬುತ್ತಿ ಜಾತ್ರೆಯಲ್ಲಿ ಮಹಿಳೆಯರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು’ ಎಂದು ಗ್ರಾಮದ ಚನ್ನಯ್ಯಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.