ADVERTISEMENT

ಕವಿತಾಳ | ಕೊಠಡಿ ಕೊರತೆ: ಬಯಲಲ್ಲೇ ಪಾಠ

ಹಿರೇಹಣಿಗಿ: ಊರ ಹೊರಗೆ ಕೊಠಡಿ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 5:01 IST
Last Updated 1 ಫೆಬ್ರುವರಿ 2025, 5:01 IST
ಕವಿತಾಳ ಸಮೀಪದ ಹಿರೇಹಣಿಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಯಲಿನಲ್ಲಿ ಪಾಠ ಮಾಡುತ್ತಿರುವುದು
ಕವಿತಾಳ ಸಮೀಪದ ಹಿರೇಹಣಿಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಯಲಿನಲ್ಲಿ ಪಾಠ ಮಾಡುತ್ತಿರುವುದು   

ಕವಿತಾಳ: ಇಲ್ಲಿಗೆ ಸಮೀಪದ ಹಿರೇಹಣಿಗಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಮಕ್ಕಳು ಬಯಲಿನಲ್ಲಿ ಕುಳಿತು ಪಾಠ ಕೇಳುವಂತಾಗಿದೆ.

ಹೊಸದಾಗಿ ನಾಲ್ಕು ಕೊಠಡಿಗಳು ಮಂಜೂರಾಗಿದ್ದರೂ ಹಳೇ ಶಾಲೆ ಹತ್ತಿರ ಜಾಗದ ಕೊರತೆ ಮತ್ತು ಹೊರ ವಲಯದ ಹೊಸ ಶಾಲೆಯ ಹತ್ತಿರ ಕೊಠಡಿ ನಿರ್ಮಿಸಲು ಸ್ಥಳೀಯರ ವಿರೋಧದ ನಡುವೆ ನಿರ್ಮಾಣ ಕಾಮಗಾರಿ ಸ್ಥಗಿತವಾಗಿದೆ.

ಎಲ್‌ಕೆಜಿ, ಯುಕೆಜಿಯ 23 ಮಕ್ಕಳು ಸೇರಿದಂತೆ 7ನೇ ತರಗತಿಯ ವರೆಗೆ ಒಟ್ಟು 242 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಐದು ಕೊಠಡಿಗಳಿದ್ದು ಸದ್ಯ 4 ಮತ್ತು 5ನೇ ತರಗತಿಯ ಮಕ್ಕಳನ್ನು ಒಂದೆಡೆ ಕೂಡಿಸಿ ಪಾಠ ಮಾಡಲಾಗುತ್ತಿದೆ. ಎಲ್‌ಕೆಜಿ, ಯುಕೆಜಿ ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಕೂಡಿಸಲಾಗುತ್ತಿದೆ.

ADVERTISEMENT

ಹೊರ ವಲಯದಲ್ಲಿ ನಿರ್ಮಿಸಿದ 4 ಕೊಠಡಿಗಳು ಹಳೇ ಶಾಲೆಯಿಂದ ದೂರದಲ್ಲಿರುವ ಕಾರಣ ದಶಕಗಳಿಂದ ಪಾಳು ಬಿದ್ದಿವೆ. ಹಿಂದೆ ಅಲ್ಲಿ ತರಗತಿಗಳು ನಡೆದರೂ ಮದ್ಯಾಹ್ನದ ಬಿಸಿಯೂಟ ಮಾಡಲು ರಾಜ್ಯ ಹೆದ್ದಾರಿ ಹಾಯ್ದು ಹಳೇ ಶಾಲೆಗೆ ಬರಬೇಕಾದ ಕಾರಣ ಅಲ್ಲಿನ ಕೊಠಡಿಗಳು ನಿರುಪಯುಕ್ತವಾಗಿವೆ. ಸದ್ಯ ಪಾಳು ಬಿದ್ದ 4 ಕೊಠಡಿಗಳನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರು ಬಳಿಸಿಕೊಳ್ಳುತ್ತಿದ್ದಾರೆ.

ದಶಕಗಳಿಂದ ಪಾಳು ಬಿದ್ದ ಹೊಸ ಶಾಲೆ ಹತ್ತಿರ ಮತ್ತೆ ಹೊಸದಾಗಿ ಕಟ್ಟಡ ನಿರ್ಮಿಸುವುದು ಎಷ್ಟು ಸೂಕ್ತ ಹಳೇ ಶಾಲೆ ಸಂಪೂರ್ಣ ತೆರವುಗೊಳಿಸಿ ಹೊಸದಾಗಿ ನಿರ್ಮಿಸಬೇಕು ಎಂದು ಗ್ರಾಮದ ವಿರೇಶ ಹೊಟೇಲ್‌ ಒತ್ತಾಯಿಸಿದರು.

ಕವಿತಾಳ ಸಮೀಪದ ಹಿರೇಹಣಿಗಿ ಗ್ರಾಮದ ಊರ ಹೊರಗೆ ನಿರ್ಮಿಸಿದ ಶಾಲಾ ಕೊಠಡಿಗಳು ಪಾಳು ಬಿದ್ದಿರುವುದು
ಹಳೇ ಕಟ್ಟಡ ತೆರವುಗೊಳಿಸಿ ಹೊಸದಾಗಿ ಎರಡು ಅಂತಸ್ತಿನ ಕಟ್ಟಡವನ್ನು ಊರಲ್ಲಿಯೇ ನಿರ್ಮಿಸಬೇಕು. ಮುಖ್ಯ ರಸ್ತೆ ಮೂಲಕ ಮಕ್ಕಳನ್ನು ಊರ ಹೊರಗಿನ ಶಾಲೆಗೆ ಕಳುಹಿಸುವುದು ಸುರಕ್ಷಿತವಲ್ಲ
ಚಂದ್ರಶೇಖರ ನಾಗರಾಳ ಹಿರೇಹಣಿಗಿ ಪಾಲಕ
ಹಳೇ ಶಾಲೆ ಹತ್ತಿರ ಎರಡು ಕಟ್ಟಡ ತೆರವುಗೊಳಿಸಿ ಎರಡು ಅಂತಸ್ತಿನ ನಾಲ್ಕು ಕೊಠಡಿ ನಿರ್ಮಿಸಲು ಅವಕಾಶವಿದೆ. ಎಸ್‌ಡಿಎಂಸಿ ತೀರ್ಮಾನ ಆಧರಿಸಿ ಕ್ರಮ ಕೈಗೊಳ್ಳಲಾಗುವುದು
ಚಂದ್ರಶೇಖರ ದೊಡ್ಡಮನಿ ಬಿಇಒ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.