ADVERTISEMENT

ರಾಯಚೂರಿನಲ್ಲಿ ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 7:31 IST
Last Updated 7 ಆಗಸ್ಟ್ 2025, 7:31 IST
ಮಾನ್ವಿ ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿದ ಕೃಷಿ ವಿಜ್ಞಾನಿಗಳು ಸೂರ್ಯಕಾಂತಿ ಬೆಳೆಯನ್ನು ಪರಿಶೀಲಿಸಿದರು
ಮಾನ್ವಿ ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿದ ಕೃಷಿ ವಿಜ್ಞಾನಿಗಳು ಸೂರ್ಯಕಾಂತಿ ಬೆಳೆಯನ್ನು ಪರಿಶೀಲಿಸಿದರು   

ಮಾನ್ವಿ: ತಾಲ್ಲೂಕಿನ ಖರಾಬದಿನ್ನಿ, ಮುದ್ದಂಗುಡ್ಡಿ, ತಡಕಲ್, ಜೀನೂರು, ದೇವಿಪುರ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆದ ಸೂರ್ಯಕಾಂತಿ ಬೆಳೆಯಲ್ಲಿ ಕೀಟಬಾಧೆ ಕಂಡುಬಂದಿದೆ.

ಈ ಗ್ರಾಮಗಳಲ್ಲಿ ಹತ್ತಿ ಮತ್ತು ಜೋಳಕ್ಕೆ ಪರ್ಯಾಯವಾಗಿ ನೂರಾರು ರೈತರು ಮುಂಗಾರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಬೆಳೆಗೆ ಆದ್ಯತೆ ನೀಡಿದ್ದಾರೆ. ಈ ವರ್ಷ ತಾಲ್ಲೂಕಿನಲ್ಲಿ ಒಟ್ಟು ‌ಸುಮಾರು 1,200 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗುತ್ತಿದೆ.

ಆದರೆ ಕೆಲ ದಿನಗಳಿಂದ ಸೂರ್ಯಕಾಂತಿ ಬೆಳೆಗೆ ತೆನೆಗಳನ್ನು ತಿನ್ನುವ ಹೆಲಿಕೋವರ್ಪಾ ಆರ್ಮಿಜೆರಾ ಕೀಟದ ಹಾವಳಿ ಕಂಡು ಬಂದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಈ ಕೀಟಗಳು ಕಾಳು ಕಟ್ಟುವ ಹಂತದಲ್ಲಿನ ಸೂರ್ಯಕಾಂತಿ ಹೂವುಗಳನ್ನು ತಿನ್ನುವ ಮೂಲಕ ಹೆಚ್ಚಿನ ನಷ್ಟವನ್ನು ಉಂಟುಮಾಡುತ್ತಿವೆ.

ADVERTISEMENT

ರೈತರು ಸೂರ್ಯಕಾಂತಿಯ ಮೊಗ್ಗು ಬರುವ ಸಮಯದಲ್ಲಿ ಜೈವಿಕ ಕೀಟನಾಶಕ‌ಗಳನ್ನು ಬಳಸಿದರೆ ಕೀಟ ಬಾಧೆ ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈಚೆಗೆ ಸೂರ್ಯಕಾಂತಿ ಬೆಳೆದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

‘ರೈತರು ಸೂರ್ಯಕಾಂತಿಯ ಮೊಗ್ಗು ಬರುವ ಸಮಯದಲ್ಲಿ ಪ್ರಾಥಮಿಕವಾಗಿ ಜೈವಿಕ ಕೀಟನಾಶಕವಾದ ಎಚ್ಎಎನ್‌ ಪಿವಿ 100 ಎಲ್ಇ ಅನ್ನು ಸಿಂಪರಣೆ ಮಾಡಬೇಕು. ಕಾಳು ಕಟ್ಟುವ ಹಂತದಲ್ಲಿ ಸೈಪರಮಿತ್ರಿನ್, ಲ್ಯಾಂಬ್ಡಾ ಸೈಹೆಲೊತ್ರಿನ್ ಅಥವಾ ಇಂಡಾಕ್ಸಾಕಾರ್ಬ ದ್ರಾವಣವನ್ನು ಸಿಂಪಡಿಸುವ ಮೂಲಕ ಈ ಕೀಟವನ್ನು ಹತೋಟಿ ಮಾಡಬಹುದು’ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೇಸಾಯ ತಜ್ಞ ಡಾ. ಮಲ್ಲರೆಡ್ಡಿ ತಿಳಿಸಿದರು.

ಹೆಲಿಕೋವರ್ಪಾ ಆರ್ಮಿಜೆರಾ ಕೀಟಗಳಿಂದ ಹಾನಿಗೀಡಾದ ಸೂರ್ಯಕಾಂತಿ ಬೆಳೆ
ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆಯ ನಿಯಂತ್ರಣಕ್ಕಾಗಿ ಕೀಟನಾಶಕಗಳನ್ನು ಸಿಂಪಡಿಸುವ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು.
ಗುರುನಾಥ ಭೂಸನೂರ, ಸಹಾಯಕ ಕೃಷಿ ನಿರ್ದೇಶಕ ಮಾನ್ವಿ
ಸೂರ್ಯಕಾಂತಿ ಬೆಳೆಗೆ ಕೀಟಗಳ ಹಾವಳಿ ತಡೆಯಲು ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಕೀಟನಾಶಕಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಬೇಕು.
ದೇವರಾಜ ದೇವಿಪುರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.