ದೇವದುರ್ಗ: ‘ವಾಲ್ಮೀಕಿ ಸಮಾಜದ ಜನರು ಅನಿಷ್ಠ ಪದ್ಧತಿ, ಮೌಢ್ಯ ಮತ್ತು ಸಾಮಾಜಿಕ ಪಿಡುಗುಗಳಿಂದ ಹೊರಬಂದು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಭವಿಷ್ಯ ರೂಪಿಸಬೇಕು’ ಎಂದು ಪತ್ರಕರ್ತ ಭೀಮರಾಯ ನಾಯಕ ಹದ್ದಿನಾಳ ಹೇಳಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ತಾಲ್ಲೂಕಾಡಳಿತ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಬದಲಾದ ಆಧುನಿಕ ವ್ಯವಸ್ಥೆಯಲ್ಲಿ ಸಮಾಜದ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು’ ಎಂದರು.
ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿ,‘ವಾಲ್ಮೀಕಿ ರಾಮಾಯಣ ಗ್ರಂಥದಲ್ಲಿ ಪೋಷಕರು, ಕುಟುಂಬ ನಿರ್ವಹಣೆ, ಅಣ್ಣ ತಮ್ಮಂದಿರು, ಗುರು ಶಿಷ್ಯರ ಸಂಬಂಧ, ದಾಂಪತ್ಯ, ಕೋಪ, ಪ್ರೀತಿ, ಭಕ್ತಿ, ಭಾವ ಕಾಣಬಹುದು. ಮಾನವೀಯ ಮೌಲ್ಯಗಳನ್ನು ಬೆಳೆಸುವ ವಿಷಯಗಳು ಅದರಲ್ಲಿವೆ’ ಎಂದು ಹೇಳಿದರು.
ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಮಾನಶಯ್ಯ ನಾಯಕ, ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ಜ್ಯೋತಿ, ಬಿಇಒ ಪಿ.ಮಹಾದೇವಯ್ಯ, ತಾ.ಪಂ ಇಒ ಬಸವರಾಜ ಹಟ್ಟಿ, ಪಿಐ ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ.ಕೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಬಿ.ಅಸುಂಡಿ, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ನಾಯಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ, ಲೋಕೋಪಯೋಗಿ ಇಲಾಖೆ ಎಇಇ ಬನ್ನಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಹೀರಾಲಾಲ, ವಾಲ್ಮೀಕಿ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.