ರಾಮನಗರ: ರಾಜ್ಯ ಸರ್ಕಾರವು ಈಗಾಗಲೇ ಘೋಷಿಸಿರುವಂತೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿ ಕನಿಷ್ಠ ₹10 ಸಾವಿರ ಗೌರವಧನವನ್ನು ಏ. 1ರಿಂದ ಪೂರ್ವಾನ್ವಯವಾಗುವಂತೆ ನೀಡಬೇಕು ಹಾಗೂ ಬಜೆಟ್‌ನಲ್ಲಿ ₹1 ಸಾವಿರ ಏರಿಕೆ ಮಾಡಬೇಕು ಎಂದು ಆಗ್ರಹಿಸಿ, ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗಾಂಧಿ ಪಾರ್ಕ್ ಬಳಿ ಜಮಾಯಿಸಿದ ಕಾರ್ಯಕರ್ತೆಯರು ಅಲ್ಲಿಂದ ಹಳೆ ಬಸ್ ನಿಲ್ದಾಣ ವೃತ್ತ, ಮುಖ್ಯ ರಸ್ತೆ, ರೈಲು ನಿಲ್ದಾಣ, ವಾಟರ್ ಟ್ಯಾಂಕ್ ವೃತ್ತ, ಜೂನಿಯರ್ ಕಾಲೇಜು ರಸ್ತೆ, ಬಿ.ಎಂ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಮಾರ್ಗದುದ್ದಕ್ಕೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಹರೀಶ್ ಎಸ್.ಎಚ್, ‘ಇದೇ ವರ್ಷದ ಜನವರಿಯ ಹೋರಾಟದ ನಂತರ ಮುಖ್ಯಮಂತ್ರಿ ನೀಡಿದ ಭರವಸೆಯ ಮೇರೆಗೆ ಹೋರಾಟ ಹಿಂತೆಗೆದುಕೊಳ್ಳಲಾಯಿತು. ಬಳಿಕ, ಸುದ್ದಿಗೋಷ್ಠಿ ನಡೆಸಿದ್ದ ಸಿ.ಎಂ, ಸರ್ಕಾರ ಆಶಾ ಕಾರ್ಯಕರ್ತರಿಗೆ ₹10 ಸಾವಿರ ಗೌರವಧನ ನೀಡುವುದಾಗಿ ಘೋಷಿಸಿದ್ದರು. ಬಜೆಟ್‌ನಲ್ಲಿಯೂ ಘೋಷಿಸುವುದಾಗಿ ಭರವಸೆ ನೀಡಿದ್ದರು ಎಂದರು.
ಘೋಷಣೆ ಬಳಿಕ ಸ್ವತಃ ಸಿ.ಎಂ ಸೇರಿದಂತೆ ಕೆಲ ಸಚಿವರೂ ತಮ್ಮ ಸರ್ಕಾರ ಆಶಾಗಳಿಗೆ ಹತ್ತು ಸಾವಿರ ನೀಡುತ್ತಿದೆ ಎಂಬ ಪ್ರಚಾರದ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಆದರೆ, ಕಾರ್ಯಕರ್ತೆಯರಿಗೆ ಇದುವರೆಗೆ ₹10 ಸಾವಿರ ಗೌರವಧನ ಜಾರಿಯಾಗಿಲ್ಲ. ಈ ಕುರಿತು ಆದೇಶವನ್ನೇ ಮಾಡಿಲ್ಲ. ಸರ್ಕಾರ ಕೊಟ್ಟ ಮಾತು ಈಡೇರಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಬೇಡಿಕೆ ಈಡೇರಿಕೆಗಾಗಿ ಇಂದು ರಾಜ್ಯದಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿದ್ದೇವೆ. ನಾಳೆ ಮತ್ತು ನಾಡಿದ್ದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಆಶಾ ಕಾರ್ಯಕರ್ತೆ ಸುಕನ್ಯ ಮಾತನಾಡಿ, 15 ವರ್ಷಗಳಿಂದ ನಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಗಳನ್ನು ನೀಡುತ್ತಿದ್ದೆಯೇ ಹೊರತು, ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಇದೀಗ ನಮ್ಮನ್ನು ಕೆಲಸದಿಂದ ತೆಗೆಯುವ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮತ್ತೊಬ್ಬ ಕಾರ್ಯಕರ್ತೆ ಫಾತಿಮಾ, ಆರಂಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಶಿಕ್ಷಣದ ನಿರ್ಬಂಧವಿಲ್ಲದಿದ್ದರೂ ಕ್ರಮೇಣ ಶಿಕ್ಷಣದ ಮಿತಿಯನ್ನು ಹೆಚ್ಚಿಸುವ ಹಾಗೂ ಕಾರ್ಯನಿರ್ವಹಣಾ ಮೌಲ್ಯಮಾಪನ ಎಂಬ ಹೆಸರಿನಲ್ಲಿ ಕೆಲಸದಿಂದ ತೆಗೆಯುವ ಹುನ್ನಾರವನ್ನು ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಇದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ, ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.