ADVERTISEMENT

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ: ಬಿಡದಿ ಬಳಿಯ ನಿರ್ಗಮನ ಬಂದ್

ಟೋಲ್ ಪಾವತಿಸಿದರಷ್ಟೇ ಹೆದ್ದಾರಿ ಪ್ರವೇಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 23:37 IST
Last Updated 8 ಫೆಬ್ರುವರಿ 2025, 23:37 IST
   

ರಾಮನಗರ: ತಾಲ್ಲೂಕಿನ ಬಿಡದಿ ಹೊರವಲಯದ ಲಕ್ಷ್ಮಿಸಾಗರ ಗೇಟ್‌ನಲ್ಲಿರುವ ಬೆಂಗಳೂರು–ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–275ರ ನಿರ್ಗಮನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಂದ್ ಮಾಡಿದೆ. ಇದರಿಂದಾಗಿ, ಹೆದ್ದಾರಿಯಲ್ಲಿ ವಾಹನಗಳ ಸವಾರರು ಟೋಲ್ ಶುಲ್ಕವಿಲ್ಲದೆ ನಿರ್ಗಮನ ರಸ್ತೆ ಮೂಲಕ ಸರ್ವೀಸ್ ರಸ್ತೆಗೆ ಬಂದು ಮುಂದೆ ಸಾಗಲು ಅವಕಾಶವಿಲ್ಲದಂತಾಗಿದೆ.

ಮೈಸೂರು ಕಡೆಯಿಂದ ಬರುವ ವಾಹನಗಳ ಸವಾರರು ಈ ನಿರ್ಗಮನದ ಮೂಲಕವೇ ಸರ್ವೀಸ್ ರಸ್ತೆಗಿಳಿಯುತ್ತಿದ್ದರು. ಮುಂದಿದ್ದ ಶೇಷಗಿರಿಹಳ್ಳಿ ಟೋಲ್‌ ತಪ್ಪಿಸಿಕೊಳ್ಳುತ್ತಿದ್ದರು. ಹೆದ್ದಾರಿಯಲ್ಲಿ ಸಂಚರಿಸಿಯೂ ಟೋಲ್‌ ಪಾವತಿಸದೆ ತಪ್ಪಿಸಿಕೊಳ್ಳುವ ವಾಹನಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಪ್ರಾಧಿಕಾರ, ಇದೀಗ ನಿರ್ಗಮನ ರಸ್ತೆಯನ್ನೇ ಮುಚ್ಚಿದೆ.

ಇನ್ನು ಮುಂದೆ ಮೈಸೂರು ಭಾಗದಿಂದ ಹಾಗೂ ರಾಮನಗರದಿಂದ ಹೆದ್ದಾರಿ ಪ್ರವೇಶಿಸುವವರು
ಟೋಲ್‌ನಿಂದ ತಪ್ಪಿಸಿಕೊಳ್ಳಬೇಕಾದರೆ, ಬಿಡದಿ ಪಟ್ಟಣ ಪ್ರವೇಶಕ್ಕೆ ಮುಂಚೆ ದಾಸಪ್ಪನದೊಡ್ಡಿಯಲ್ಲಿರುವ ನಿರ್ಗಮನ ದ್ವಾರದಲ್ಲೇ ಸರ್ವೀಸ್ ರಸ್ತೆಗಿಳಿಯಬೇಕು. ಅಪ್ಪಿತಪ್ಪಿಯೂ ಮುಂದೇನಾದರೂ ಹೋದರೆ, ಶೇಷಗಿರಿಹಳ್ಳಿಯಲ್ಲಿರುವ ಟೋಲ್‌ ಪ್ಲಾಜಾದಲ್ಲಿ ಅನಿವಾರ್ಯವಾಗಿ ಟೋಲ್‌‌ ಪಾವತಿಸಬೇಕಾಗುತ್ತದೆ.

ADVERTISEMENT

ಪ್ರಾಧಿಕಾರವು ನಿರ್ಮಿಸಿರುವ 118 ಕಿ.ಮೀ. ಉದ್ದದ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಮಾರ್ಚ್‌ನಲ್ಲಿ ಉದ್ಘಾಟಿಸಿದ್ದರು. ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿ 22 ತಿಂಗಳಾಗಿದೆ. ಬೆಂಗಳೂರಿನ ಕುಂಬಳಗೋಡಿನಿಂದ ಆರಂಭವಾಗುವ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ, ಮಂಡ್ಯ ಜಿಲ್ಲೆಯಲ್ಲಿ 58 ಕಿ.ಮೀ ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ ವ್ಯಾಪಿಸಿದೆ.

ವಾಹನಗಳ ಸಂಚಾರಕ್ಕೆ ಮುಕ್ತವಾದಾಗಿನಿಂದ ಇಲ್ಲಿಯವರೆಗೆ ಪ್ರಾಧಿಕಾರವು ₹438 ಕೋಟಿ ಟೋಲ್ ಸಂಗ್ರಹಿಸಿದೆ. ಇದುವರೆಗೆ ಮೂರು ಸಲ ಟೋಲ್ ಶುಲ್ಕ ಪರಿಷ್ಕರಿಸಲಾಗಿದೆ. ಸದ್ಯ ಕಾರು, ವ್ಯಾನ್, ಜೀಪಿಗೆ ಏಕಮುಖ ಸಂಚಾರಕ್ಕೆ ₹170 ಹಾಗೂ ದ್ವಿಮುಖ ಸಂಚಾರಕ್ಕೆ ₹255 ಇದೆ. ಲಘು ವಾಹನ ಮತ್ತು ಮಿನಿ ಬಸ್‌ಗೆ ಕ್ರಮವಾಗಿ ₹275 ಮತ್ತು ₹415 ಇದೆ.

ಪ್ರಾಧಿಕಾರ ನಡೆಗೆ ಆಕ್ರೋಶ

ಬಿಡದಿ ಹೊರವಲಯದಲ್ಲಿ ನಿರ್ಗಮನ ಬಂದ್ ಮಾಡಿರುವುದಕ್ಕೆ ವಾಹನಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ರಾಮನಗರಿಂದ ಬೆಂಗಳೂರಿಗೆ ಹೋಗುವವರು ಸಹ ದುಬಾರಿ ಟೋಲ್ ಪಾವತಿಸಿಯೇ ಹೋಗುವಂತೆ ಮಾಡಿರುವುದು ಪ್ರಾಧಿಕಾರದ ದುಡ್ಡಿನ ಹಪಾಹಪಿಗೆ ಸಾಕ್ಷಿಯಾಗಿದೆ. ಇಷ್ಟಕ್ಕೂ ಪ್ರಾಧಿಕಾರ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಯನ್ನು ಇನ್ನೂ ಪೂರ್ಣವಾಗಿ ನಿರ್ಮಿಸಿಲ್ಲ. ಆದರೂ, ಟೋಲ್‌ ಇಲ್ಲದೆ ಸವಾರರು ಒಂದಿಷ್ಟು ದೂರ ಹೆದ್ದಾರಿಯಲ್ಲಿ ಹೋಗದಂತೆ ನಿರ್ಗಮನ ಬಂದ್ ಮಾಡಿರುವುದು ಸರಿಯಲ್ಲ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.