ADVERTISEMENT

ಬಿಡದಿ | ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಬೆಂಕಿ: 7 ಮಂದಿಗೆ ಗಂಭೀರ ಗಾಯ

ಅಡುಗೆ ಅನಿಲ ಸೋರಿಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:06 IST
Last Updated 9 ಅಕ್ಟೋಬರ್ 2025, 2:06 IST
ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದ ಶೆಡ್‌ಗೆ ಬಿಡದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು
ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದ ಶೆಡ್‌ಗೆ ಬಿಡದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು   

ಬಿಡದಿ (ರಾಮನಗರ): ಇಲ್ಲಿನ ಕೈಗಾರಿಕಾ ಪ್ರದೇಶದ ಕಾಡುಮನೆ ಕ್ರಾಸ್ ಬಳಿಯ ಭೀಮೇನಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರು ತಂಗಿದ್ದ ಶೆಡ್‌ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿ, ಬೆಂಕಿ ಹೊತ್ತಿಕೊಂಡಿದ್ದರಿಂದ ಶೆಡ್‌ನಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಏಳು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರ್ಮಿಕರಾದ ಮನ್ರುಲ್ ಶೇಕ್, ತಜ್ಬುಲ್ ಶೇಕ್, ಜಾವೆದ್ ಅಲಿ, ಜಿಯಾಬುರ್ ಶೇಕ್, ಶಫಿಜುಲ್ ಶೇಕ್ ಹಾಗೂ ನೂರ್ ಜಮಲ್ ಗಾಯಗೊಂಡವರು. ಶೇ 60ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿರುವ ಎಲ್ಲರನ್ನೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಭೀಮೇನಹಳ್ಳಿ ಬಳಿ ಎಲಿಗೆನ್ಸ್ ಲೇಔಟ್‌ನಲ್ಲಿ ಐಶಾರಾಮಿ ವಿಲ್ಲಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು, ನಿರ್ಮಾಣ ಹಂತದ ಸಮೀಪದಲ್ಲೇ ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಿಸಿಕೊಂಡು ತಂಗಿದ್ದರು. ಸೋಮವಾರ (ಅ. 6) ಕೆಲಸ ಮುಗಿಸಿಕೊಂಡು ಬಂದಿದ್ದ ಕಾರ್ಮಿಕರು, ರಾತ್ರಿ ಶೆಡ್‌ನಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡಿ ಮಲಗಿದ್ದರು.

ADVERTISEMENT

ಸಿಲಿಂಡರ್‌ ಸರಿಯಾಗಿ ಬಂದ್ ಆಗದಿದ್ದರಿಂದ, ರಾತ್ರಿಯಿಡೀ ಅನಿಲ ಸೋರಿಕೆಯಾಗಿದೆ. ನಸುಕಿನಲ್ಲಿ 2 ಗಂಟೆ ಸುಮಾರಿಗೆ ಎದ್ದಿರುವ ಕಾರ್ಮಿಕನೊಬ್ಬ, ಬೀಡಿ ಸೇದಲು ಬೆಂಕಿ ಕಡ್ಡಿ ಗೀರುತ್ತಿದ್ದಂತೆ, ಇಡೀ ಶೆಡ್‌ಗೆ ಬೆಂಕಿ ವ್ಯಾಪಿಸಿಕೊಂಡಿದೆ. ಇದರಿಂದಾಗಿ ಎದ್ದಿದ್ದ ಕಾರ್ಮಿಕ ಸೇರಿದಂತೆ ಮಲಗಿದ್ದವರಿಗೂ ಬೆಂಕಿ ಹೊತ್ತಿಕೊಂಡಿದೆ.

ಕೂಡಲೇ ಎಲ್ಲರೂ ಕೂಗಿಕೊಂಡು ಹೊರಕ್ಕೆ ಓಡಿ ಬಂದಿದ್ದಾರೆ. ಕಾರ್ಮಿಕರ ಚೀರಾಟ ಕೇಳಿದ ಸಮೀಪದ ಭದ್ರತಾ ಸಿಬ್ಬಂದಿ ಹಾಗೂ ಅಕ್ಕಪಕ್ಕದ ಮನೆಯವರು, ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಆಂಬುಲೆನ್ಸ್ ಕರೆಯಿಸಿ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಘಟನೆಯಿಂದಾಗಿ, ಶೆಡ್ ಒಳಗಿದ್ದ ಎಲ್ಲಾ ವಸ್ತುಗಳು ಸಹ ಬೆಂಕಿಗೆ ಆಹುತಿಯಾಗಿವೆ ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದರು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್, ಬಿಡದಿ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಲ್ವರ ವಿರುದ್ಧ ಪ್ರಕರಣ

ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆ ಪೊಲೀಸರು ಕಾರ್ಮಿಕರ ಕಂಟ್ರಾಕ್ಟರ್ ಹಸನ್ ಮಲಿಕ್ ಎಲಿಗೆನ್ಸ್ ಲೇಔಟ್ ಮಾಲೀಕ ಜಮೀನಿನ ಮಾಲೀಕ ಶೆಡ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ಯಾವುದೇ ಮೂಲಸೌಕರ್ಯ ಒದಗಿಸದೆ ಅತಿ ಕಿರಿದಾದ ಶೆಡ್‌ನಲ್ಲಿ ಅಪಾಯಕಾರಿ ಅನಿಲ ಸಿಲಿಂಡರ್ ಏಳು ಮಂದಿಯನ್ನ ಇರಿಸಲಾಗಿತ್ತು. ಹಾಗಾಗಿ ಮಾಲೀಕರ ವಿರುದ್ಧವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.