
ಬಿಡದಿ (ರಾಮನಗರ): ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕಿ ಛಾಯಾವತಿ ಬಾಯಿ ಕೆ.ಟಿ (46) ಎಂಬುವರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಇಲ್ಲಿನ ಲಕ್ಷ್ಮಿಸಾಗರ ಗೇಟ್ ಬಳಿ ಸೋಮವಾರ ನಡೆದಿದೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಛಾಯಾವತಿ ಅವರು, ಸಹೋದ್ಯೋಗಿಯಾದ ಹಿರಿಯ ಆರೋಗ್ಯ ನಿರೀಕ್ಷಕ ದಕ್ಷಿಣಮೂರ್ತಿ ಅವರೊಂದಿಗೆ ಬೈಕ್‌ನಲ್ಲಿ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ ಬರುತ್ತಿದ್ದರು. ಬೆಳಿಗ್ಗೆ 10.40ರ ಸುಮಾರಿಗೆ ಲಕ್ಷ್ಮಿಸಾಗರ ಗೇಟ್ ಬಳಿ ಸರ್ವೀಸ್ ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಹಿಂದೆ ಕುಳಿತಿದ್ದ ಛಾಯಾವತಿ ಅವರು ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಅವರ ಮೇಲೆ ಲಾರಿ ಚಕ್ರಗಳು ಹರಿದಿವೆ. ಇದರಿಂದಾಗಿ ಸ್ಥಳದಲ್ಲೇ ಅವರು ಕೊನೆಯುಸಿರೆಳೆದರು. ಡಿಕ್ಕಿಯ ರಭಸಕ್ಕೆ ಪಕ್ಕದ ಫುಟ್‌ಪಾತ್ ಮೇಲೆ ಬಿದ್ದ ದಕ್ಷಿಣಮೂರ್ತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಛಾಯಾವತಿ ಅವರಿ ಪತಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಶವವನ್ನು ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಘಟನೆ ಕುರಿತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಲಾರಿ ವಶಪಡಿಸಿಕೊಳ್ಳಲಾಗಿದೆ ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.