ADVERTISEMENT

ಹಾರೋಹಳ್ಳಿ | ಸಿಸಿಟಿವಿ ಕ್ಯಾಮೆರಾ ಸ್ಥಗಿತ: ಸುರಕ್ಷತೆಗೆ ಇಲ್ಲ ಕಣ್ಗಾವಲು

ಪ್ರಮುಖ ವೃತ್ತಗಳು, ಜನವಸತಿ ಬಡಾವಣೆಗಳಲ್ಲಿ ಅಪರಾಧ ಕೃತ್ಯಗಳ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 7:57 IST
Last Updated 7 ಏಪ್ರಿಲ್ 2025, 7:57 IST
ಹಾರೋಹಳ್ಳಿ ಮಖ್ಯ ವೃತ್ತದಲ್ಲಿ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿರುವುದು
ಹಾರೋಹಳ್ಳಿ ಮಖ್ಯ ವೃತ್ತದಲ್ಲಿ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿರುವುದು   

ಹಾರೋಹಳ್ಳಿ: ಪಟ್ಟಣ ವ್ಯಾಪ್ತಿಯ ಆಯಕಟ್ಟಿನ ಸ್ಥಳ, ಪ್ರಮುಖ ವೃತ್ತಗಳು, ಜನವಸತಿ ಬಡಾವಣೆಗಳು, ಕೈಗಾರಿಕಾ ಪ್ರದೇಶ, ಸಾರ್ವಜನಿಕ ಪ್ರದೇಶಗಳಲ್ಲಿ ಸಮರ್ಪಕ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲದಿರುವುದರಿಂದ ಅಪರಾಧ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾ ಹಾಗೂ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲದ ಜನವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅದರಲ್ಲೂ ಹಾರೋಹಳ್ಳಿ ಮುಖ್ಯ ಸರ್ಕಲ್‌ನ ಕೈಗಾರಿಕಾ ಪ್ರದೇಶ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಬಳಿ ಕ್ಯಾಮೆರಾಗಳು ಕಾರ್ಯ ಸ್ಥಗಿತಗೊಂಡಿವೆ.

ಯಾವುದೇ ಅಪರಾಧ ಪ್ರಕರಣ ಭೇದಿಸುವಲ್ಲಿ ಸಿಸಿಟಿವಿ ಟಿವಿ ಕ್ಯಾಮೆರಾ ಪ್ರಮುಖ ಪಾತ್ರ ವಹಿಸುತ್ತದೆ. ಪಟ್ಟಣದ ಆಯಕಟ್ಟಿನ ಸ್ಥಳ, ವೃತ್ತಗಳು, ಬಸ್ ನಿಲ್ದಾಣ, ಕೈಗಾರಿಕೆ, ವಾಣಿಜ್ಯ ಮಳಿಗೆ, ಪಟ್ಟಣ ಪ್ರವೇಶಿಸುವ ಹಾಗೂ ಹೊರ ಹೋಗುವ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದ್ದರೆ ಆರೋಪಿಗಳ ಪತ್ತೆ ಕಾರ್ಯ ಸುಲಭವಾಗಲಿದೆ.

ADVERTISEMENT

ಸಿಸಿಟಿವಿ ಕ್ಯಾಮೆರಾ ಇರುವ ಕಡೆ ಅಪರಾಧ ಕೃತ್ಯ ಎಸಗಿದರೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಕಳವು ಮಾಡಲು ಕಳ್ಳರು ಹಿಂಜರಿಯುತ್ತಾರೆ. ಅಲ್ಲದೆ, ಅಪಘಾತ ಹಾಗೂ ಹಿಟ್‌ ಅಂಡ್ ರನ್ ಕೇಸ್‌ಗಳಲ್ಲಿ ತಪ್ಪೆಸಗಿದ, ಸಂಚಾರ ನಿಮಯ ಉಲ್ಲಂಘಿಸಿದ ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪ್ರಮುಖ ಪಾತ್ರ ವಹಿಸುತ್ತವೆ.

ಮನೆ, ವಾಣಿಜ್ಯ ಮಳಿಗೆಗಳಲ್ಲಿ ಕಳವು, ರಸ್ತೆಗಳಲ್ಲಿ ಮಹಿಳೆಯರ ಸರಗಳವು ಸೇರಿದಂತೆ ಬಹಳಷ್ಟು ಅಪರಾಧ ಪ್ರಕರಣಗಳನ್ನು ಭೇದಿಸಲು ಹಾಗೂ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಲು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪ್ರಮುಖ ಸಾಕ್ಷ್ಯಗಳಾಗಿ ಬಳಕೆಯಾಗುತ್ತಿವೆ.

ಸಿಸಿಟಿವಿ ಕ್ಯಾಮೆರಾ ಕಾರ್ಯ ಸ್ಥಗಿತ: ಹಾರೋಹಳ್ಳಿ ಪಟ್ಟಣ ಹಾಗೂ ಇತರೆ ಕಡೆ 2-3 ವರ್ಷಗಳ ಹಿಂದೆ ಪ್ರಮುಖ ಭಾಗಗಳಲ್ಲಿ 8ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ನಿರ್ವಹಣೆ ಕೊರತೆ ಹಾಗೂ ಹಳತಾದ ಕಾರಣ ಇವುಗಳಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವುದು ಕೇವಲ 2-3 ಮಾತ್ರ. ಬಹುತೇಕ ಸಿಸಿಟಿವಿ ಕ್ಯಾಮೆರಾ ಇದ್ದೂ ಇಲ್ಲದಂತಿವೆ.

ಮುಖ್ಯವಾಗಿ ಹಾರೋಹಳ್ಳಿ ಪ್ರವೇಶಿಸುವ ಹಾಗೂ ನಿರ್ಗಮಿಸುವ ಕಡೆ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗಿದೆ. ಕಳವು, ಅಪಘಾತ, ಇತರ ಕೃತ್ಯಗಳು ನಡೆದಾಗ ಪಟ್ಟಣದ ಖಾಸಗಿ ವಾಣಿಜ್ಯ ಮಳಿಗೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮೇಲೆ ಅವಲಂಬಿಸಬೇಕಾಗಿದೆ. ಇದರಿಂದ ಪ್ರಕರಣಗಳ ತನಿಖೆಗೆ ಹಿನ್ನಡೆಯಾಗುತ್ತಿದೆ.

ಕಾರ್ಖಾನೆಗಳಲ್ಲಿ ಕಳ್ಳತನ: ಕೈಗಾರಿಕಾ ಪ್ರದೇಶದಲ್ಲಿ ಕಳವು ಪ್ರಕರಣಗಳು ಹೆಚ್ಚಿದ್ದು ಸಿಸಿಟಿವಿಯಲ್ಲಿ ಕೃತ್ಯ ದಾಖಲಾದರೂ ಅಸ್ಪಷ್ಟವಾದ ದೃಶ್ಯಗಳಿಂದ ಪ್ರಕರಣಕ್ಕೆ ಯಾವುದೇ ಲಿಂಕ್‌ ಸಿಗುವುದಿಲ್ಲ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಯೊಬ್ಬರು.

ನಿರ್ಮಾಣ ಹಂತದ ಕಟ್ಟಡಗಳೇ ಟಾರ್ಗೆಟ್: ಹೊಸದಾಗಿ ನಿರ್ಮಾಣ ಮಾಡುವ ಕಟ್ಟಡಗಳು, ಹೊಸ ಬಡಾವಣೆಗಳನ್ನು ಗುರಿಯಾಗಿಸಿ ಕಳವು ಮಾಡಲಾಗುತ್ತಿದೆ. ಪಟ್ಟಣದ ಪ್ರಮುಖ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದೆ, ಬೀದಿ ದೀಪ ದುರಸ್ತಿ ಮಾಡಿಸದೆ ಪಟ್ಟಣ ಪಂಚಾಯತ್ ಕಳ್ಳರಿಗೆ ಕಳ್ಳತನ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂಬುದು ಸಾರ್ವಜನಿಕರ ಟೀಕೆ ಆಗಿದೆ.

ಹಾರೋಹಳ್ಳಿ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು
ಹಾರೋಹಳ್ಳಿ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು
ರಾಷ್ಟ್ರೀಯ ಹೆದ್ದಾರಿ ಹಾಗೂ ಪಟ್ಟಣದ ಪ್ರಮುಖ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲು ಪಟ್ಟಣ ಪಂಚಾಯಿತಿಗೆ ಮನವಿ ಮಾಡಲಾಗಿದೆ
ಅರ್ಜುನ್ ಇನ್‌ಸ್ಪೆಕ್ಟರ್ ಹಾರೋಹಳ್ಳಿ
ಹಾರೋಹಳ್ಳಿ ಪಂಚಾಯಿತಿ ವತಿಯಿಂದ 4 ಕಡೆ ಕ್ಯಾಮೆರಾ ಹಾಕಲಾಗಿದೆ. ಎಲ್ಲ ಕಡೆ ಕೂಡ ಕಾರ್ಯನಿರ್ವಹಿಸುತ್ತಿವೆ
ಶ್ವೇತಾ ಬಾಯಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಮಳೆಗಾಲದಲ್ಲಿ ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಕೆಲಸ ಮಾಡುವುದಿಲ್ಲ. ಗುಣಮಟ್ಟದ ಕ್ಯಾಮೆರಾ ಹಾಗೂ ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ಹೊರ ಸೂಸುವ ಬೀದಿದೀಪಗಳನ್ನು ಅಳವಡಿಸಬೇಕು
ನಾಗರಾಜು ಸಾಮಾಜಿಕ ಕಾರ್ಯಕರ್ತ
ಮುಖ್ಯರಸ್ತೆ ಹಾಗೂ ಪ್ರಮುಖ ಬಡಾವಣೆಗಳಲ್ಲಿ ಕ್ಯಾಮೆರಾ ಅಳವಡಿಸಿದರೆ ಅಪರಾಧ ಪ್ರಕರಣ ಕಡಿಮೆಯಾಗುತ್ತವೆ. ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು
ಭೈರವ ವೈ.ಬಿ. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ
ಸುರಕ್ಷತೆ ದೃಷ್ಟಿಯಿಂದ ಕ್ಯಾಮೆರಾ ಅವಶ್ಯ
ಹಾರೋಹಳ್ಳಿಯಲ್ಲಿ ದೊಡ್ಡ ಮಟ್ಟದ ಕೈಗಾರಿಕಾ ಪ್ರದೇಶವಿದ್ದು ಆಗಾಗ ಕಳ್ಳತನ ಪ್ರಕರಣಗಳು ಕಂಡು ಬರುತ್ತಿವೆ. ಜತೆಗೆ ಪಟ್ಟಣ ಬೆಳೆಯುತ್ತಿದ್ದು ಹೊರಗಡೆಯಿಂದ ಕೆಲಸಕ್ಕೆ ಬರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅಲ್ಲದೆ ಪ್ರತಿಷ್ಠಿತ ಜೈನ್ ಹಾಗೂ ದಯಾನಂದ ಸಾಗರ್ ಸಂಸ್ಥೆಗಳು ಕೂಡ ಇವೆ. ಕೈಗಾರಿಕಾ ಪ್ರದೇಶದಿಂದ ಸಾಗಣೆ ವಾಹನಗಳು ಹೆಚ್ಚಾಗಿ ಸಂಚಾರ ಮಾಡುವುದರಿಂದ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಆಳವಡಿಸುವ ಅವಶ್ಯ ಇದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಗಮನಹರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.