ADVERTISEMENT

ಕಾಂಗ್ರೆಸ್‌ನಲ್ಲಿ ನಾನಿನ್ನೂ ಒಂದು ವರ್ಷದ ಮಗು: ಚನ್ನಪಟ್ಟಣ ಶಾಸಕ ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 9:18 IST
Last Updated 24 ನವೆಂಬರ್ 2025, 9:18 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ಚನ್ನಪಟ್ಟಣ: ‘ನಾನು ಒಂದು ವರ್ಷದ ಹಿಂದೆ ಕಾಂಗ್ರೆಸ್‌ ಸೇರಿ ಶಾಸಕನಾಗಿರುವವನು. ಪಕ್ಷದಲ್ಲಿ ನಾನಿನ್ನೂ ಒಂದು ವರ್ಷದ ಮಗು. ನನಗೆ ಯಾವ ಬಣವೂ ಇಲ್ಲ. ನಾಯಕತ್ವ ಬದಲಾವಣೆ ಕುರಿತ ಚರ್ಚೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ನಮ್ಮ ನಾಯಕರು’ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಷಯ ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಈ ವಿಚಾರದಲ್ಲಿ ನನ್ನನ್ನು ಎಳೆದು ತಂದು ಚರ್ಚೆಗೆ ಆಸ್ಪದ ಕೊಡಬೇಡಿ. ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ. ಈ ವಿಷಯದಲ್ಲಿ ಪಕ್ಷದ ನಾಯಕರು ಸಭೆ ಕರೆದು ಅಭಿಪ್ರಾಯ ಕೇಳಿದರೆ ಹೇಳುತ್ತೇನೆ’ ಎಂದರು.

‘ಸಹಕಾರ ಇಲಾಖೆಯ ಕೆಲಸವೊಂದರ ವಿಷಯವಾಗಿ ಸಹಕಾರ ಕೇಳುವುದಕ್ಕಾಗಿ ಮುಖ್ಯಮಂತ್ರಿ ಅವರನ್ನು ನಾನು ಭೇಟಿಯಾಗಿದ್ದೆ. ಈಗಲೂ ಆ ಕುರಿತು ಕರೆ ಮಾಡಿ ಮಾತನಾಡಿದೆ. ನೀರಾವರಿಗೆ ಸಂಬಂಧಿಸಿದ ಕೆಲಸಗಳ ಬಗ್ಗೆ ಉಪ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಅಭಿವೃದ್ದಿ ದೃಷ್ಟಿಯಿಂದ ಇಬ್ಬರ ಬಳಿಯೂ ಮಾತನಾಡುತ್ತೇನೆಯೇ ಹೊರತು, ರಾಜಕೀಯ ವಿಚಾರವಾಗಿ ಏನನ್ನೂ ಚರ್ಚಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಸದ್ಯದ ಬೆಳವಣಿಗೆಗಳ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಗೊಂದಲವನ್ನು ಬಗೆಹರಿಸುವುದಾಗಿ ಅವರೇ ಹೇಳಿದ್ದಾರೆ. ಹಾಗಾಗಿ, ನಮ್ಮ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಕಾಂಗ್ರೆಸ್‌ನ ಕೆಲ ಶಾಸಕರ ದೆಹಲಿ ಭೇಟಿ ಕುರಿತು ಪ್ರಶ್ನೆಗೆ, ‘ಆ ಬಗ್ಗೆಯೂ ನನಗೆ ಗೊತ್ತಿಲ್ಲ. ಮಾಗಡಿ ಶಾಸಕ ಬಾಲಕೃಷ್ಣ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ನಮ್ಮ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಬೇಕಿದೆ. ಹಾಗಾಗಿ, ಅದನ್ನು ಕೇಳಲು ದೆಹಲಿಗೆ ಹೋಗಿರಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.