ರಾಮನಗರ: ಕೊರಾನಾ ಅವಧಿಯಲ್ಲಿನ ಸಲಕರಣೆಗಳ ಖರೀದಿ ಹಗರಣವನ್ನು ರಾಜ್ಯ ಬಿಜೆಪಿ ಸರ್ಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಆಗ್ರಹಿಸಿದರು.
ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಸಲಕರಣಗಳ ಖರೀದಿಗೆ ಒಟ್ಟಾರೆ ₨2108 ಕೋಟಿ ವ್ಯಯಿಸಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ ವಾಸ್ತವದಲ್ಲಿ ₨4167 ಕೋಟಿ ಖರ್ಚು ಮಾಡಿರುವುದಕ್ಕೆ ದಾಖಲೆಗಳಿವೆ. ಹೀಗಾಗಿ ಇವುಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಇದನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒಳಪಡಿಸಬೇಕು. ಈ ಬಗ್ಗೆ ಚರ್ಚಿಸಲು ಮೂರು ದಿನಗಳ ವಿಶೇಷ ಅಧಿವೇಶನ ಕರೆಯಬೇಕು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಅವರು ಒತ್ತಾಯಿಸಿದರು.
"ಸದ್ಯ ದಿನವೊಂದರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಕೋವಿಡ್ ಸೋಂಕಿತರು ಭಾರತದಲ್ಲಿ ಪತ್ತೆ ಆಗುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದೇಶವು ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 1.5 ಲಕ್ಷದಷ್ಟಿದ್ದು, ಈ ತಿಂಗಳಾಂತ್ಯಕ್ಕೆ ಇದು 3.5 ಲಕ್ಷಕ್ಕೆ ಏರಿಕೆ ಆಗಬಹುದು. ಆದರೆ ಅಷ್ಟು ರೋಗಿಗಳಿಗೆ ಬೇಕಾಗುವಷ್ಟು ಹಾಸಿಗೆ, ವೆಂಟಿಲೇಟರ್ ನಮ್ಮಲ್ಲಿ ಇಲ್ಲವೇ ಇಲ್ಲ. ಬೆಂಗಳೂರಿನ ವಸ್ತು ಪ್ರದರ್ಶನ ಕೇಂದ್ರದಲ್ಲಿ 10 ಸಾವಿರ ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ಕೇವಲ ಪ್ರಚಾರಕ್ಕೆ ಸೀಮಿತ ಆಗಿದೆ. ವಾಸ್ತವದಲ್ಲಿ ಅಲ್ಲಿ ಕೇವಲ 1500 ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬಹುದು ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಆದರೆ ಸರ್ಕಾರ, ಸಚಿವರು ಮಾತ್ರ ಜನರನ್ನು ಯಾಮಾರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
"ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲೇ ಮೂರನೇ ಸ್ಥಾನದಲ್ಲಿ ಇದೆ. ರಾಜ್ಯದಿಂದ ಕೇಂದ್ರಕ್ಕೆ ಸರಾಸರಿ 1-1.05 ಲಕ್ಷ ಕೋಟಿ ಜಿಎಸ್‌ಟಿ ಹೋಗುತ್ತಿದೆ. ಆದರೆ ಲಾಕ್‌ಡೌನ್‌ನಲ್ಲಿ ಈ ಪ್ರಮಾಣ 96 ಸಾವಿರ ಕೋಟಿಗೆ ಇಳಿದಿದೆ. ಆದಾಗ್ಯೂ ಕೇಂದ್ರವು ರಾಜ್ಯಕ್ಕೆ ಅನುದಾನ ನೀಡಲು ನಿರಾಕರಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ "ಬೆಂಗಳೂರಿನಲ್ಲಿ ಈಚೆಗೆ 26 ವರ್ಷದ ಬಾಣಂತಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯದೇ ಮೃತಪಟ್ಟ ಘಟನೆ ಮನ ಕಲಕುವಂತೆ ಇತ್ತು. ರಾಜ್ಯದಲ್ಲಿ ಬಡವರಿಗೆ ಚಿಕಿತ್ಸೆ ಸಿಗದೇ ನರಳುತ್ತಿರುವುದು ದುರದೃಷ್ಟಕರ. ಈ ಅಕ್ರಮಗಳನ್ನು ಪ್ರಶ್ನಿಸಲು ಹೋದವರಿಗೆ ನೋಟಿಸ್ ನೀಡಲಾಗುತ್ತಿದೆ. ಬಿಜೆಪಿ ನಾಯಕರು ತಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ ಎಂಬುದನ್ನು ಮರೆತಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್.ರವಿ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಗಂಗಾಧರ್, ಪಕ್ಷದ ಮುಖಂಡರಾದ ಎಚ್.ಸಿ. ಬಾಲಕೃಷ್ಣ, ಸಯ್ಯದ್ ಜಿಯಾವುಲ್ಲಾ, ಇಕ್ಬಾಲ್ ಹುಸೇನ್, ಜಿ.ಪಂ. ಅಧ್ಯಕ್ಷ ಬಸಪ್ಪ ಇದ್ದರು.
‘ಸರ್ಕಾರದಿಂದ ತಪ್ಪು ಮಾಹಿತಿ’
‘ಕೋವಿಡ್ ಸೋಂಕಿತರ ವಿಚಾರದಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರ ವಾಸ್ತವ ಸಂಗತಿಯನ್ನು ಮರೆ ಮಾಚುತ್ತಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.
‘ರಾಮನಗರ ಜಿಲ್ಲೆಯಲ್ಲಿ ಕೇವಲ 17 ಮಂದಿ ಕೋವಿಡ್‌ನಿಂದ ಸತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ವಾಸ್ತವದಲ್ಲಿ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಅಂಕಿ-ಸಂಖ್ಯೆಯನ್ನೂ ಸರ್ಕಾರ ಮುಚ್ಚಿಡುತ್ತಿದೆ. ಅವರು ನೀಡುವ ಸಂಖ್ಯೆಗಿಂತ 2-3 ಪಟ್ಟು ಹೆಚ್ಚಿನ ಮಂದಿಗೆ ಸೋಂಕು ತಗುಲಿದೆ. ಸಾಕಷ್ಟು ಜನರು ಖಾಸಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.
ಜಿಲ್ಲೆಯಲ್ಲಿ ಇನ್ನಾದರೂ ಕೋವಿಡ್ ಪರೀಕ್ಷೆಗಳ ವರದಿ ಅಂದೇ ಸಿಗಬೇಕು. ಜನರು ಸೋಂಕಿನ ಬಗ್ಗೆ ಇನ್ನಷ್ಟು ಎಚ್ಚರ ವಹಿಸಬೇಕು’ ಎಂದು ಮನವಿ ಮಾಡಿದರು.
ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ‘ಯಾರು ಅವರಿಗೆ ಹೊಸ ಅವಕಾಶ ಮಾಡಿಕೊಟ್ಟಿದ್ದಾರೋ ಅವರಿಗೆ ನಿಷ್ಟರಾಗಿದ್ದರೆ ಸಾಕು, ಮುಂದಿನದ್ದನ್ನು ಕಾಲ ಬಂದಾಗ ಹೇಳುತ್ತೇನೆ’ ಎಂದರು.
*
ಭ್ರಷ್ಟಾಚಾರವನ್ನು ಸಂವಿಧಾನತ್ಮಕವಾಗಿ ಪ್ರಶ್ನಿಸಿದ್ದಕ್ಕೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಕಾನೂನಿನ ಚೌಕಟ್ಟಿನಲ್ಲೇ ಉತ್ತರಿಸುತ್ತೇವೆ.
–ಚಂದ್ರಶೇಖರ್, ರಾಜ್ಯಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.