
ಮಾಗಡಿ: ತಾಲ್ಲೂಕಿನ ಗುಡೇಮಾರನಹಳ್ಳಿಯಲ್ಲಿ ಗುರುವಾರ ರಾತ್ರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಪುತ್ರ ಆರ್. ಶಶಾಂಕ್ ಅವರ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಬೆಳಗುಂಬ ಗ್ರಾಮದ ರಾಜೇಶ್ (27) ಮೃತರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಅವರು, ಕೆಲಸ ಮುಗಿಸಿಕೊಂಡು ರಾತ್ರಿ 10ರ ಸುಮಾರಿಗೆ ಮನೆಗೆ ವಾಪಸ್ಸಾಗುತ್ತಿದ್ದರು.
ಈ ವೇಳೆ, ಮಾಗಡಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಶಶಾಂಕ್ ಅವರಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ರಾಜೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಕುದೂರು ಠಾಣೆ ಪೊಲೀಸರು, ಶವವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತ ನಡೆದಾಗ ಶಶಾಂಕ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಮೃತ ರಾಜೇಶ್ ಕಡೆಯವರು ದೂರಿದ್ದಾರೆ.
ಘಟನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರೇವಣ್ಣ, ಪುತ್ರನ ಕಾರು ಅಪಘಾತಕ್ಕೀಡಾಗಿ ಯುವಕ ಮೃತಪಟ್ಟಿರುವುದು ನಿಜ. ಆದರೆ, ಶಶಾಂಕ್ ಬದಲು ಚಾಲಕ ಕಾರು ಚಲಾಯಿಸುತ್ತಿದ್ದ ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಯಾರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.