ರಾಮನಗರ: ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ. ಅದಕ್ಕೆ ನಮ್ಮ ನಾಯಕರೂ (ಡಿ.ಕೆ. ಶಿವಕುಮಾರ್) ಒಪ್ಪಿದ್ದು, ಅಧ್ಯಕ್ಷ ಸ್ಥಾನ ಬಿಡುವುದಕ್ಕೆ ತಯಾರಾಗಿದ್ದಾರೆ. ಹೈಕಮಾಂಡ್ ಸೂಕ್ತ ವ್ಯಕ್ತಿಯನ್ನು ಗುರುತಿಸಿದರೆ ನಾವೂ ಸ್ವಾಗತಿಸುತ್ತೇವೆ’ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಲಕ್ಷ್ಮಿಪುರದಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ನಾಯಕರಾದ ಶಿವಕುಮಾರ್ ಅವರು ಷರತ್ತುಗಳನ್ನು ಹಾಕಿ ಅಧ್ಯಕ್ಷ ಸ್ಥಾನ ಬಿಡುತ್ತಾರೆ ಎನ್ನುವುದು ಮಾಧ್ಯಮ ಸೃಷ್ಟಿ. ಅಧ್ಯಕ್ಷ ಸ್ಥಾನ ಬಿಡಿ ಎಂದು ಹೈಕಮಾಂಡ್ ಸೂಚಿಸಿದರೆ ಬಿಟ್ಟು ಕೊಡಲು ಸಿದ್ಧರಿದ್ದಾರೆ’ ಎಂದರು.
‘ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ನಡೆದು, ಸತ್ಯಾಂಶ ಹೊರಬರಲಿ. ಅದಕ್ಕೂ ಮುಂಚೆಯೇ ಸ್ಥಳೀಯ ಶಾಸಕರನ್ನು ಆತ್ಮಹತ್ಯೆಗೆ ಹೊಣೆ ಮಾಡುವುದು ಸರಿಯಲ್ಲ. ನಾವು ಗ್ಯಾರಂಟಿ ಯೋಜನೆಗಳ ನಡುವೆಯೇ ಅಭಿವೃದ್ಧಿ ಮಾಡುತ್ತಿದ್ದೇವೆ. ಇದನ್ನು ಸಹಿಸದ ಬಿಜೆಪಿಯವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಜಾತಿ ಮತ್ತು ಸಾವಿನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
‘ಇದು ಘಜ್ನಿ, ಘೋರಿ ಸರ್ಕಾರ. ಇದರ ವಿರುದ್ಧ ಯುದ್ಧ ಆರಂಭಿಸುತ್ತೇನೆ’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ‘ಯುದ್ದಕ್ಕೆ ಮೊದಲು ಜೆಡಿಎಸ್ ಮತ್ತು ಬಿಜೆಯವರು ಒಗ್ಗಟ್ಟಾಗಲಿ. ನಾನು ಹೋರಾಟ ಮಾಡಬೇಕಾ? ನೀನು ಮಾಡಬೇಕಾ? ಎಂಬ ಅವರ ಕಿತ್ತಾಟವನ್ನು ರಾಜ್ಯದ ಜನ ನೋಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಅನುಕಂಪಕ್ಕೆ ಯತ್ನ: ‘ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರ ಕೇತಗಾನಹಳ್ಳಿಯ ತಮ್ಮ ತೋಟ ಕಬಳಿಸುತ್ತಿದೆ ಎಂಬ ಕುಮಾರಸ್ವಾಮಿ ಅವರ ಮಾತಿನಲ್ಲಿ ಹುರುಳಿಲ್ಲ. ಹೈಕೋರ್ಟ್ ಆದೇಶದ ಮೇರೆಗೆ ಒತ್ತುವರಿ ತೆರವು ನಡೆದಿದೆಯೇ ಹೊರತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿ.ಕೆ. ಶಿವಕುಮಾರ್ ಆದೇಶದಿಂದಲ್ಲ. ಹೈಕೋರ್ಟ್ ಆದೇಶದ ಮೇಲೂ ಅವರು ಅನುಕಂಪ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದರು.
‘ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ದೂರಿನ ಅನ್ವಯ ಪ್ರಕರಣದ ತನಿಖೆ ನಡೆದು ವಿಚಾರಣೆ ಬಳಿಕ, ಹೈಕೋರ್ಟ್ ಒತ್ತುವರಿ ತೆರವಿಗೆ ಆದೇಶ ಮಾಡಿದೆ. ಕುಮಾರಸ್ವಾಮಿ ಅವರು ಒತ್ತುವರಿ ಮಾಡಿಕೊಂಡಿರುವ ಜಾಗ ಬಿಟ್ಟುಕೊಟ್ಟರೆ ಈ ಸಮಸ್ಯೆಯೇ ಇರುವುದಿಲ್ಲ’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.