ADVERTISEMENT

ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ: ಮಂಜಮ್ಮ ಜೋಗತಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 6:22 IST
Last Updated 4 ಜನವರಿ 2024, 6:22 IST
ಕನಕಪುರ ರೂರಲ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ ಮಾತನಾಡಿದರು. ಆರ್‌ಇಎಸ್‌ ಸಂಸ್ಥೆ ಪದಾಧಿಕಾರಿಗಳು, ಪ್ರಾಧ್ಯಾಪಕರು ಉಪಸ್ಥಿತರಿದ್ದರು
ಕನಕಪುರ ರೂರಲ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ ಮಾತನಾಡಿದರು. ಆರ್‌ಇಎಸ್‌ ಸಂಸ್ಥೆ ಪದಾಧಿಕಾರಿಗಳು, ಪ್ರಾಧ್ಯಾಪಕರು ಉಪಸ್ಥಿತರಿದ್ದರು   

ಕನಕಪುರ: ಸೃಷ್ಟಿಯಲ್ಲಿ ಯಾರು ಏನಾದರೂ ಆಗಿ ಹುಟ್ಟಬಹುದು. ಮನುಷ್ಯ ಸೇರಿದಂತೆ ಪ್ರತಿಯೊಂದು ಪ್ರಾಣಿಗೂ ಬದುಕುವ ಹಕ್ಕಿದೆ. ಆ ಹಕ್ಕನ್ನು ಯಾರು ಕಸಿದುಕೊಳ್ಳಬೇಡಿ. ಗಂಡು, ಹೆಣ್ಣು, ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನವಾದ ಹಕ್ಕಿದೆ ಎಂದು ಪದ್ಮಶ್ರೀ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ಇಲ್ಲಿನ ರೂರಲ್‌ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಭ್ರಮ–2024 ಉದ್ಘಾಟಿಸಿ ಮಾತನಾಡಿದರು.

‘ಸಮಾಜದಲ್ಲಿ ನಾವು ಹೀಗೆ ಆಗಬೇಕು. ಹೀಗೆ ಹುಟ್ಟಬೇಕು ಎಂದು ಯಾರಿಗೂ ಗೊತ್ತಾಗುವುದಿಲ್ಲ. ನಾನು ಗಂಡಾಗಿ ಹುಟ್ಟಿ, ಹೆಣ್ಣಾಗಿ ಪರಿವರ್ತನೆಯಾಗಿ ಸಮಾಜದಲ್ಲಿ ಸಾಕಷ್ಟು ನೋವು, ಅವಮಾನ ಅನುಭವಿಸಿದ್ದೇನೆ. ಸ್ವಂತ ಕುಟುಂಬದವರಿಗೆ ಬೇಡವಾಗಿ ಮನೆಯಿಂದ ಹೊರ ಬರಬೇಕಾಯಿತು’ ಎಂದು ಬದುಕಿನ ಸತ್ಯ ಬಿಚ್ಚಟ್ಟರು.

ADVERTISEMENT

ಕುಟುಂಬದಿಂದ ತಿರಸ್ಕೃತ ಆದ ಮೇಲೆ ಸಾಯಬೇಕೆಂದು ಪ್ರಯತ್ನಪಟ್ಟೆ. ಮನೆಯಿಂದ ಹೊರತಬ್ಬಿದ ಮೇಲೆ ಭಿಕ್ಷಾಟನೆ ಮಾಡಿ ನಂತರ ಗುರುಗಳ ಆಶೀರ್ವಾದದೊಂದಿಗೆ ಹಳ್ಳಿಯಿಂದ ದೆಹಲಿವರೆಗೆ ಹೋಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಹಾದಿ ಬಗ್ಗೆ ವಿವರಿಸಿದರು.

ಗಂಡಾಗಲಿ, ಹೆಣ್ಣಾಗಲಿ, ಯಾರೇ ಆಗಲಿ ಪ್ರತಿಯೊಬ್ಬರಿಗೂ ಒಂದು ಬದುಕಿದೆ. ಅದನ್ನು ಹುಡುಕಿಕೊಂಡು ಧೈರ್ಯವಾಗಿ ಬದುಕು ಕಟ್ಟಿಕೊಳ್ಳಬೇಕಿದೆ. ಪೋಷಕರು ಆಸೆ, ಆಕಾಂಕ್ಷೆ ಬದಿಗೊತ್ತಿ ಮಕ್ಕಳಿಗಾಗಿ ಜೀವನ ಸವೆಸುತ್ತಾರೆ. ಅದಕ್ಕೆ ಮೋಸ ಮಾಡಬೇಡಿ. ಮೊಬೈಲ್‌ನಿಂದ ದೂರವಿರಿ ಎಂದು ಹೇಳಿದರು.

’ನಿಮ್ಮ ಸುತ್ತಮುತ್ತ ಯಾರಾದರೂ ಪರಿವರ್ತನೆಯಾದರೆ ಅದನ್ನು ಅಪಹಾಸ್ಯ ಮಾಡಬೇಡಿ. ಅವಮಾನಿಸಬೇಡಿ, ಬದಕಲು ಅವಕಾಶ ಮಾಡಿಕೊಡಿ. ನಿಮ್ಮ ಕುಟುಂಬದಲ್ಲಿ ನನ್ನಂತೆ ಯಾವುದಾದರೂ ಮಗು ಹುಟ್ಟಿದರೆ ಹಣ, ಆಸ್ತಿ ಮಾಡಬೇಡಿ. ವಿದ್ಯಾಭ್ಯಾಸ ಕೊಡಿ. ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಮುಂದೆ ಕೀರ್ತಿ ಹೆಚ್ಚಿಸುವ ಕೆಲಸ ಮಾಡುತ್ತಾರೆ‘ ಎಂದರು.

’ನಾವು ಎಷ್ಟು ಓದಿದ್ದೇವೆ ಎನ್ನುವುದು ಮುಖ್ಯವಲ್ಲ. ನಾವು ಮಾಡುವ ಕೆಲಸ, ಅದರಲ್ಲಿ ನಾವು ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ. ಸಮಯಕ್ಕೆ ಬೆಲೆ ಕೊಡಿ. ಮುಂದೊಂದು ದಿನ ಅದೇ ಸಮಯ ನಿಮಗೆ ದೊಡ್ಡ ಬೆಲೆ ಕೊಡುತ್ತದೆ‘ ಎಂದು ಕಿವಿಮಾತು ಹೇಳಿದರು.

ಆರ್‌ಇಎಸ್‌ ಅಧ್ಯಕ್ಷ ಎಚ್‌.ಕೆ.ಶ್ರೀಕಂಠ ಮಾತನಾಡಿ, ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ತುಂಬಾ ವ್ಯತ್ಯಾಸವಿದೆ. ಮುಂದೆ ಉನ್ನತ ಶಿಕ್ಷಣದ ಜತೆಗೆ ಕೌಶಲ್ಯ ಆಧಾರಿತ ಶಿಕ್ಷಣಬೇಕಿದೆ. ಆಗ ಮಾತ್ರ ಈ ಸ್ಪರ್ಧಾ ಪ್ರಪಂಚದಲ್ಲಿ ಯಶಸ್ವಿಯಾಗಬಹುದು. ಗುರಿ ಸರಿಯಾಗಿದ್ದರೆ ಸಾಧನೆ ಮಾಡಬಹುದು ಎಂಬುದಕ್ಕೆ ಮಂಜಮ್ಮ ಜೋಗತಿ ಉದಾಹರಣೆ ಎಂದು ತಿಳಿಸಿದರು.

ಬೆಂಗಳೂರು ನಾಟ್ಯಾಂಜಲಿ ನೃತ್ಯ ತಂಡ ಆಚಾರ್ಯ ಅಶೋಕ್‌ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟಿತು.

ಆರ್‌ಇಎಸ್ ಸಂಸ್ಥೆ ಕಾರ್ಯದರ್ಶಿ ಪುಟ್ಟಸ್ವಾಮಿ, ಜಂಟಿ ಕಾರ್ಯದರ್ಶಿ ಸೂರ್ಯ ನಾರಾಯಣಗೌಡ, ಖಜಾಂಚಿ ಮಂಜುನಾಥ್, ನಿರ್ದೇಶಕ ಕೆ.ಬಿ.ನಾಗರಾಜು, ಶಿವಕುಮಾರ್, ರಾಮೇಗೌಡ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗದಿಗೆಪ್ಪ ಹಿತ್ತಲಮನಿ, ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ, ಪ್ರಾಧ್ಯಾಪಕ ದೇವರಾಜು ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.