ADVERTISEMENT

ಮಾಗಡಿ: ಅಸಮರ್ಪಕ ಬಸ್‌ ಸಂಚಾರ ಸರಿಪಡಿಸಿ, ಅಧಿಕಾರಿಗಳೊಂದಿಗೆ ಮಾಜಿ ಶಾಸಕ ಚರ್ಚೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 5:59 IST
Last Updated 21 ಜನವರಿ 2023, 5:59 IST
ಮಾಗಡಿ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಜಗದೀಶ್‌, ಡಿಟಿಒ ಪುರುಷೋತ್ತಮ್‌ ಅವರೊಂದಿಗೆ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಚರ್ಚಿಸಿದರು
ಮಾಗಡಿ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಜಗದೀಶ್‌, ಡಿಟಿಒ ಪುರುಷೋತ್ತಮ್‌ ಅವರೊಂದಿಗೆ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಚರ್ಚಿಸಿದರು   

ಮಾಗಡಿ: ಪಟ್ಟಣದ ಶಾಲಾ ಕಾಲೇಜುಗಳಿಗೆ ಬಂದುಹೋಗುವ ಮತ್ತು ನಿತ್ಯ ಬೆಂಗಳೂರಿಗೆ ಹೋಗಿಬರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಸರ್ಕಾರಿ ಬಸ್‌ ಸಂಚರಿಸುವಂತೆ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಕಳೆದ ವಾರ ಅಸಮರ್ಪಕ ಬಸ್‌ ಸಂಚಾರದ ವಿರುದ್ಧ ವಿದ್ಯಾರ್ಥಿಗಳು ‍ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ, ಸರ್ಕಾರಿ ಬಸ್‌ ಡಿಪೊದಲ್ಲಿ ಶುಕ್ರವಾರ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕುಣಿಗಲ್‌–ಮಾಗಡಿ, ಕಲ್ಲುದೇವನಹಳ್ಳಿ, ಅಜ್ಜನಹಳ್ಳಿ, ಮತ್ತಿಕೆರೆ, ಬ್ಯಾಲಕೆರೆ, ಗುಡೇಮಾರನಹಳ್ಳಿ, ಹೊಸಪಾಳ್ಯ, ಲಕ್ಷ್ಮೀಪುರ ಮಾರ್ಗವಾಗಿ ನಿತ್ಯ ಮುಂಜಾನೆ 9 ಗಂಟೆಗೆ ಮತ್ತು ಸಂಜೆ 4ಗಂಟೆಯ ನಂತರ ಸೂಕ್ತ ಬಸ್‌ ಸಂಚರಿಸಿದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಸಹಿಸುವುದಿಲ್ಲ. ವಿದ್ಯಾರ್ಥಿಗಳು ಸಹ ಸರ್ಕಾರಿ ಬಸ್‌ ಕಂಡಕ್ಟರ್‌ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಬೆಂಗಳೂರು ಮಾರ್ಗವಾಗಿ ಸಂಜೆ ಮತ್ತು ಮುಂಜಾನೆ ಸರ್ಕಾರಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಅನುಕೂಲ ಮಾಡಿಕೊಡಬೇಕು ಎಂದರು.

ADVERTISEMENT

ಕೆಎಸ್‌ಆರ್‌ಟಿಸಿ ಸಂಸ್ಥೆಯ ಜಿಲ್ಲಾಧಿಕಾರಿ ಜಗದೀಶ್‌ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಸಾರ್ವಜನಿಕರು ಸರ್ಕಾರಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವುದು ಸೂಕ್ತ. ಬಸ್‌ಪಾಸ್‌ ಪಡೆದಿರುವ ವಿದ್ಯಾರ್ಥಿಗಳು ಮತ್ತು ಕಂಡಕ್ಟರ್‌ ಕೇಳಿದಾಗ ಪಾಸ್‌ ತೋರಿಸಬೇಕು. ಒಂದೇ ಬಸ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರಯಾಣಿಸಬೇಕು ಎಂದು ಕಾದುಕುಳಿತುಕೊಳ್ಳದೆ ಮಾರ್ಗದಲ್ಲಿ ಬಂದ ಬಸ್‌ನಲ್ಲಿ ಪ್ರಯಾಣಿಸಬೇಕು. ಶಾಲಾ, ಕಾಲೇಜು ಆರಂಭಕ್ಕೆ ಮುನ್ನ ಮತ್ತು ಬಿಡುವ ಸಮಯಕ್ಕೆ ಸರಿಯಾಗಿ ಬಸ್‌ ಸಂಚರಿಸುವಂತೆ ಅನುಕೂಲ ಮಾಡಿಕೊಡುತ್ತೇವೆ ಎಂದರು.

ಕೆಎಸ್‌ಆರ್‌ಟಿಸಿ ಡಿಟಿಒ ಪುರುಷೋತ್ತಮ್‌ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಒರಟಾಗಿ ವರ್ತಿಸುವ ಸಾರಿಗೆ ನೌಕರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಸಮಯಪಾಲನೆ ಮತ್ತು ಕಂದಾಯ ಸಂಗ್ರಹ ನಮ್ಮ ಸಿಬ್ಬಂದಿಗಳ ಕರ್ತವ್ಯವಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿದ್ದೇವೆ ಎಂದರು.

ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ, ಕಾಂಗ್ರೆಸ್‌ ಮುಖಂಡ ಚಂದ್ರೇಗೌಡ, ವಿಜಯಕುಮಾರ್‌, ಸಿ.ಜಯರಾಮ್‌, ತೇಜಸ್‌ಕುಮಾರ್‌, ವಸಂತ ಹಾಗೂ ವಿದ್ಯಾರ್ಥಿಗಳು, ಡಿಪೊ ಮ್ಯಾನೇಜರ್‌ ಸುಂದರ್‌ರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.