ADVERTISEMENT

ರಾಮನಗರ: ಸಾಮೂಹಿಕ ಗಜಗೌರಿ ವ್ರತ ಆಚರಣೆ

ಸೀತಾರಾಮ ಸೇವಾ ಟ್ರಸ್ಟ್‌ನಿಂದ ಫೆ. 4ರಿಂದ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 4:44 IST
Last Updated 4 ಫೆಬ್ರುವರಿ 2026, 4:44 IST
<div class="paragraphs"><p> ರಾಮನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ&nbsp; ಸಾಮೂಹಿಕ ಗಜಗೌರಿ ವ್ರತಾಚರಣೆಯ ಆಹ್ವಾನ ಪತ್ರಿಕೆಯನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಬಿಡುಗಡೆ ಮಾಡಿದರು.&nbsp;</p></div>

ರಾಮನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಸಾಮೂಹಿಕ ಗಜಗೌರಿ ವ್ರತಾಚರಣೆಯ ಆಹ್ವಾನ ಪತ್ರಿಕೆಯನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಬಿಡುಗಡೆ ಮಾಡಿದರು. 

   

ರಾಮನಗರ: ‘ಲೋಕ ಕಲ್ಯಾಣಾರ್ಥವಾಗಿ ನಗರದ ಅಗ್ರಹಾರದ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗದಲ್ಲಿ ಫೆ. 4ರಿಂದ 8ರವರೆಗೆ ಸಾಮೂಹಿಕ ಗಜಗೌರಿ ವ್ರತ ಆಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯುಕ್ತ ನಗರದಲ್ಲಿ ಐದು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ರಾಮನಗರದ ಛತ್ರದಬೀದಿಯ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಸೀತಾರಾಮ ಸೇವಾಟ್ರಸ್ಟ್, ಬಲಮುರಿ ಗಣಪತಿ ದೇವಾಲಯ ಟ್ರಸ್ಟ್, ಅಯ್ಯಪ್ಪ ಸ್ವಾಮಿ ಸೇವಾ ಮಂಡಳಿ ಪದಾಧಿಕಾರಿಗಳ ಜೊತೆ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ADVERTISEMENT

‘ಸೀತಾರಾಮ ಸೇವಾ ಟ್ರಸ್ಟ್‌, ಬಲಮುರಿ ಗಣಪತಿ ದೇವಸ್ಥಾನ ಟ್ರಸ್ಟ್ ಹಾಗೂ ಅಯ್ಯಪ್ಪ ಸ್ವಾಮಿ ಸೇವಾ ಮಂಡಳಿ ಸಹಯೋಗದ ಈ ಕಾರ್ಯಕ್ರಮದಲ್ಲಿ 108 ದಂಪತಿಗಳಿಂದ ಫೆ. 4ರಿಂದಲೇ ವ್ರತಾಚರಣೆ ಶುರುವಾಗಲಿದೆ. 8ರಂದು ಗಜಗೌರಿ ಮೂರ್ತಿಗಳ ವಿಸರ್ಜನೆಯೊಂದಿಗೆ ಸಂಪನ್ನವಾಗಲಿದೆ’ ಎಂದು ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜೀವನದಲ್ಲಿ ಯಶಸ್ಸು ಮತ್ತು ಮಕ್ಕಳ ಶ್ರೇಯಕ್ಕಾಗಿ ಈ ವ್ರತಾಚರಣೆ ನಡೆಯುತ್ತದೆ. ರಾಮನಗರದ ನಾಗರಿಕರ ಒಳಿತಿಗಾಗಿ ಮೂರು ದಶಕಗಳ ನಂತರ ಸೇವಾ ಮಂಡಳಿಗಳು ಈ‌ ವ್ರತಾಚರಣೆ ಹಮ್ಮಿಕೊಂಡಿವೆ. ಫೆ. 4ರಂದು ಅಯ್ಯಪ್ಪ ಸ್ವಾಮಿ ಸೇವಾ ಮಂಡಳಿಯಿಂದ ಗಂಗಪೂಜೆ, ಗೋಪೂಜೆ, ಗಣಪತಿ ಪೂಜೆ, ಪೂರ್ಣಾಹುತಿ ಮತ್ತು ಪ್ರಸಾದ ವಿನಿಯೋಗ ಜರುಗಲಿದೆ’ ಎಂದರು.

‘ಫೆ. 5ರಂದು ಗಣಪತಿ ಹೋಮ, ನವಗ್ರಹ ಹೋಮ, ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿಪೂಜೆ ನಡೆಯಲಿದೆ. 6ರಂದು ಬೆಳಿಗ್ಗೆ 7 ಗಂಟೆಯಿಂದ ಗಜಗೌರಿ ವ್ರತ ಆಚರಿಸುವ ದಂಪತಿಗಳು ರಾಜಬೀದಿಯಲ್ಲಿ ಕಳಸ ಸಮೇತ ಮೆರವಣಿಗೆಯಲ್ಲಿ ಪೂಜಾ ಮಂಟಪಕ್ಕೆ ಬರಲಿದ್ದಾರೆ. ಬೆಳಿಗ್ಗೆ 9ರಿಂದ 3ರವರೆಗೆ ಗಜಗೌರಿ ವ್ರತಾಚರಣೆ ನಡಯಲಿದೆ. ಸಂಜೆ ಮಕ್ಕಳಿಂದ ಕಂಸಾಳೆ ನೃತ್ಯ, ಮಹಿಳೆಯರಿಂದ ಡೊಳ್ಳು ಕುಣಿತ ಹಾಗೂ 7ಕ್ಕೆ ಗಂಗಾರತಿ ನಡೆಯಲಿದೆ’ ಎಂದು ತಿಳಿಸಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ವಿ. ಉಮೇಶ್ ಮಾತನಾಡಿ, ‘ಫೆ. 7ರಂದು ನಗರದ ಪೌರ ಕಾರ್ಮಿಕರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮ, ಗಾಯತ್ರಿ ಜಪ, ಗಾಯತ್ರಿ ಹೋಮ, ಅಖಂಡ ಭಜನೆ ನಡೆಯಲಿದೆ. ರಾತ್ರಿ 7ರ ನಂತರ ಗಜಗೌರಿ ಹರಿಕಥೆ, ದುರ್ಗಾ ದೀಪ ನಮಸ್ಕಾರ, ಪ್ರಸಾದ ವಿನಿಯೋಗ ಜರುಗಲಿದೆ. 8ರಂದು ಬೆಳಿಗ್ಗೆ ಶಿವಗಂಗೆ ದೇವರಿಗೆ ಗಿರಿಜಾ ಕಲ್ಯಾಣ ನಡೆಯಲಿದೆ’ ಎಂದರು.

‘ಮಧ್ಯಾಹ್ನ 3ರಿಂದ ಗಜ ಗೌರಿಗಳನ್ನು ಆನೆ ಮೇಲಿರಿಸಿ ಮೆರವಣಿಗೆ ಮಾಡಿ ನಂತರ ರಂಗರಾಯರದೊಡ್ಡಿ ಕೆರೆಯಲ್ಲಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸೇರಿದಂತೆ ನಗರದ ಗಣ್ಯರು ಸಹಕಾರ ನೀಡುತ್ತಿದ್ದಾರೆ. ಐದು ದಿನಗಳ ಕಾರ್ಯಕ್ರಮಕ್ಕೆ ಜನರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು’ ಎಂದು ಮನವಿ ಮಾಡಿದರು.

‘ಫೆ. 5ರಂದು ನಡೆಯುವ ಆಶ್ಲೇಷ ಬಲಿ ಪೂಜೆಗೆ ಸಾರ್ವಜನಿಕರು ಭಾಗವಹಿಸಿ ಸಂಕಲ್ಪಿಸಬಹುದು. ನಾಗದೋಷ ಇರುವವರು ಭಾಗವಹಿಸಿದರೆ ಪರಿಹಾರವಾಗಲಿದೆ ಎಂಬ ನಂಬಿಕೆ ಇದೆ. ಇದರ ಪ್ರಯೋಜನವನ್ನು ಜನರು ಪಡೆಯಬೇಕು’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ, ರಾಮನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ನಗರಸಭೆ ಸದಸ್ಯ ಸೋಮಶೇಖರ್ ಮಣಿ, ಮುಖಂಡರಾದ ಪಿ. ಶಿವಾನಂದ್, ಆರ್.ವಿ. ಸುರೇಶ್, ರಾಘವೇಂದ್ರ, ಗೂಳಿಗೌಡ, ಸುಪ್ರಿಯ ಕುಮಾರ್, ಸಿದ್ದು, ರಘು, ಚಂದ್ರಶೇಖರ್, ಕುಮಾರಸ್ವಾಮಿ, ದೀಪು, ನಾಗೇಂದ್ರ ಗುಪ್ತ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.