ADVERTISEMENT

ರಾಮನಗರ: ಮತ್ತೆ ಸದ್ದು ಮಾಡಿದ ಕಾಂಗ್ರೆಸ್ ಗಿಫ್ಟ್ ಕಾರ್ಡ್‌ಗಳು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 6:43 IST
Last Updated 27 ಏಪ್ರಿಲ್ 2024, 6:43 IST
ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಹಂಚಿದ್ದಾರೆ ಎನ್ನಲಾದ ಗಿಫ್ಟ್ ಕಾರ್ಡ್‌
ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಹಂಚಿದ್ದಾರೆ ಎನ್ನಲಾದ ಗಿಫ್ಟ್ ಕಾರ್ಡ್‌   

ರಾಮನಗರ: ವಿಧಾನಸಭಾ ಚುನಾವಣೆಯಲ್ಲಿ ಸದ್ದು ಮಾಡಿದ್ದ ಗಿಫ್ಟ್ ಕಾರ್ಡ್‌ಗಳು, ಲೋಕಸಭಾ ಚುನಾವಣೆಯ ಮತದಾನದ ದಿನದಂದು ಸಹ ಸದ್ದು ಮಾಡಿವೆ. ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ಕ್ಷೇತ್ರದ ವಿವಿಧೆಡೆ ಗಿಫ್ಟ್ ಕಾರ್ಡ್‌ಗಳನ್ನು ಹಂಚಿದ್ದಾರೆಂದು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಕನಕಪುರ, ಹಾರೋಹಳ್ಳಿ, ರಾಮನಗರ ಸೇರಿದಂತೆ ಕೆಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್, ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರಿದ್ದ ಗಿಫ್ಟ್ ಕಾರ್ಡ್‌ಗಳನ್ನು ಹಂಚುತ್ತಿರುವ ಆರೋಪ ಮಾಡಿದ್ದಾರೆ. ಕ್ಯೂ ಆರ್ ಕೋಡ್ ಜೊತೆಗೆ ಕ್ರಮ ಸಂಖ್ಯೆಯನ್ನು ಈ ಕಾರ್ಡ್‌ಗಳು ಹೊಂದಿವೆ.

ಮನೆ ಮನೆಗೆ ಗಿಫ್ಟ್ ಕಾರ್ಡ್‌ಗಳನ್ನು ಹಂಚುವಾಗ ಮೈತ್ರಿ ಕಾರ್ಯಕರ್ತರು ಅವರನ್ನು ತಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಹಾರೋಹಳ್ಳಿಯಲ್ಲಿ ಬೆಳಿಗ್ಗೆ ಕಾರ್ಡ್ ಹಂಚುತ್ತಿದ್ದ ಕಾರನ್ನು ತಡೆದ ಮೈತ್ರಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು ಕಾರ್ಡ್ ಇದ್ದ ಬ್ಯಾಗನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹಾರೋಹಳ್ಳಿ ತಾಲ್ಲೂಕಿನ ಕಡಸಿಕೊಪ್ಪ ಗ್ರಾಮದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 120 ಕುಕ್ಕರ್‌ ಬಾಕ್ಸ್‌ಗಳನ್ನು ಜಪ್ತಿ ಮಾಡಿರುವ ಹಾರೋಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಕಾರ್ಡ್‌ ಮೌಲ್ಯ ₹5 ಸಾವಿದ್ದಾಗಿತ್ತು. ಆದರೆ, ಆ ಕಾರ್ಡ್‌ನ ಗಿಫ್ಟ್ ಇನ್ನೂ ತಲುಪಿಲ್ಲ. ಇದೀಗ ಹಂಚಿಕೆ ಮಾಡಿರುವ ಕಾರ್ಡ್‌ಗಳ ಮೌಲ್ಯ ಸಹ ₹5 ಸಾವಿರದ್ದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದೇನು ಚುನಾವಣೆಯ ಗಿಮಿಕ್ಕೊ ಅಥವಾ ನಿಜವಾಗಲೂ ಗೆದ್ದರೆ ಗಿಫ್ಟ್‌ ಅನ್ನು ಮನೆಗೆ ತಲುಪಿಸುತ್ತಾರೆ ಕಾದು ನೋಡಬೇಕಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಹಂಚಿದ್ದಾರೆ ಎನ್ನಲಾದ ಗಿಫ್ಟ್ ಕಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.