ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಹೊರ ರಾಜ್ಯದ ವಲಸೆ ಕಾರ್ಮಿಕರಿದ್ದು, ಗ್ರಾಮಸ್ಥರಲ್ಲಿ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಾಗಿದೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ್ ಸೇರಿದಂತೆ ಉತ್ತರ ಭಾರತದ ಯುವಕರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ 5 ವರ್ಷದ ಬಾಲಕಿಯ ಪ್ರಕರಣದ ಬಳಿಕ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಯೂ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತವಾಗಿದೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಒಟ್ಟು 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 8 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಉತ್ತರ ಭಾರತದ ಬಿಹಾರ್, ಅಸ್ಸಾಂ, ಉತ್ತರಪದೇಶ, ಮಣಿಪುರ ಮುಂತಾದ ರಾಜ್ಯದ ಕಾರ್ಮಿಕರು ಕಾರ್ಯ ನಿರ್ವಹಿಸಿತ್ತಿದ್ದಾರೆ.
ಎಲ್ಲೆಲ್ಲಿ ಹೆಚ್ಚು ವಾಸ: ವಲಸೆ ಕಾರ್ಮಿಕರು ಬನ್ನಿಕುಪ್ಪೆ, ಹುಲ್ಲಿ ಸಿದ್ದೇಗೌಡನದೊಡ್ಡಿ, ರಾಮಸಾಗರ, ಯರೇಹಳ್ಳಿ, ಗಾಣಳುದೊಡ್ಡಿ, ಹಾರೋಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಬಾಡಿಗೆ ಪಡೆದು ವಾಸವಾಗಿದ್ದಾರೆ.
ಮಾಹಿತಿ ಪಡೆಯದೆ ಬಾಡಿಗೆ ಮನೆ: ಉತ್ತರ ಭಾರತದ ಕಾರ್ಮಿಕರಿಗೆ ಬಾಡಿಗೆ ನೀಡುವ ಸ್ಥಳೀಯ ಮಾಲೀಕರು ಅವರ ಬಳಿ ಗುರುತಿನ ಚೀಟಿಯಾಗಲಿ, ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ರೀತಿಯ ಮಾಹಿತಿ ಪಡೆದುಕೊಳ್ಳುವುದಿಲ್ಲ. ಹಾಗಾಗಿ ಸ್ಥಳೀಯ ಮಟ್ಟದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದರೂ ಅವರ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ.
ನಿಯಮ ಮೀರಿ ವಾಸ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಥಳೀಯರಿಂದ ಬಾಡಿಗೆ ಪಡೆಯುವ ವಲಸೆ ಕಾರ್ಮಿಕರು ಒಂದೇ ಮನೆಯಲ್ಲಿ 10 ರಿಂದ 20 ಮಂದಿ ವಾಸವಿದ್ದು, ಪಾಳಿಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ಕೆಲವು ಕಾರ್ಖಾನೆಗಳು ಒಟ್ಟಿಗೆ ಕಾರ್ಮಿಕರನ್ನು ಕರೆ ತಂದು ಬಾಡಿಗೆ ಮನೆಗಳಲ್ಲಿ ಇಡುತ್ತಿದ್ದು ಯಾರು ಯಾವ ಸಮಯದಲ್ಲಿ ಬರುತ್ತಾರೆ ಹೋಗುತ್ತಾರೆ ಎಂಬ ಮಾಹಿತಿಯೇ ಇರುವುದಿಲ್ಲ .
ಸ್ಥಳೀಯರಲ್ಲಿ ಆತಂಕ: ಬಾಡಿಗೆ ಮನೆಯಲ್ಲಿ ವಾಸ ಮಾಡುವ ಯುವಕರ ವರ್ತನೆಗಳು ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೆಲವು ಬಾರಿ ದಿನದ 24ಗಂಟೆಯೂ ಯುವಕರ ಕಾರುಬಾರು ಕಂಡು ಬರುತ್ತಿದ್ದು, ಸ್ಥಳೀಯ ಬಾಡಿಗೆದಾರರಲ್ಲಿ ಆತಂಕ ಹೆಚ್ಚಾಗುತ್ತಿದೆ.
ಕಾಗದದಲ್ಲಿ ಉಳಿದ ಆದೇಶ: ಸರ್ಕಾರ ಅಕ್ರಮ ವಲಸಿಗರನ್ನು ತಡೆಯುವ ಸಂಬಂಧ ಈ ಹಿಂದೆ ಮನೆ ಬಾಡಿಗೆ ನೀಡುವ ಮಾಲೀಕರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕು. ಈ ವೇಳೆ ಅವರ ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿ ಪಡೆಯಬೇಕೆಂಬ ನಿಯಮವಿದ್ದರೂ ಅದು ಕೇವಲ ಕಾಗದದಲ್ಲಿ ಮಾತ್ರ ಉಳಿದುಕೊಂಡಿದೆ.
ಮಕ್ಕಳ ಕಾಯುವ ಚಿಂತೆ: ಹುಬ್ಬಳ್ಳಿ ಪ್ರಕರಣದ ನಂತರ ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಇರುವುದರಿಂದ ಮಕ್ಕಳನ್ನು ಹೇಗೇ ನೋಡಿಕೊಳ್ಳಬೇಕು ಎಂಬುವುದರ ಬಗ್ಗೆ ಚಿಂತೆಯಾಗಿದೆ.
ಒಟ್ಟಿನಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು, ಕಾರ್ಖಾನೆಯ ಮಾಲೀಕರು ಹಾಗೂ ಬಾಡಿಗೆಗೆ ಮನೆ ನೀಡಿರುವ ಮಾಲೀಕರಿಗೆ ಪೊಲೀಸರು ಸೂಕ್ತ ಎಚ್ಚರಿಕೆ ನೀಡಿ ಅವರ ಮಾಹಿತಿ ಸಂಗ್ರಹ ಮಾಡಬೇಕೆಂಬ ಆಗ್ರಹ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಮಿಕರ ಮಾಹಿತಿ ಸಂಗ್ರಹ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ನಿಖರವಾದ ಲೆಕ್ಕ ದೊರಕುವುದುಜಯಪ್ರಕಾಶ್ ಕಾರ್ಮಿಕ ನಿರೀಕ್ಷಕರು
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರ ಗುರುತಿನ ಚೀಟಿ ಮತ್ತು ವಿಳಾಸದ ಮಾಹಿತಿ ಪಡೆದು ಎಚ್ಚರ ವಹಿಸಬೇಕುಕುಮಾರ್ ಬನ್ನಿಕುಪ್ಪೆ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.