
ರಾಮನಗರ: ‘ಮನೆಯಲ್ಲಿ ದೇವರ ಮನೆಗೆ ಕೊಡುವಷ್ಟೇ ಆದ್ಯತೆಯನ್ನು ಗ್ರಂಥಾಲಯಕ್ಕೂ ನೀಡಬೇಕು. ಭಕ್ತಿ ಜೊತೆಗೆ ಜ್ಞಾನವೂ ಬೇಕು. ಆ ನಿಟ್ಟಿನಲ್ಲಿ ಬಸವಣ್ಣನವರು 12ನೇ ಶತಮಾನದಲ್ಲೇ ಭಕ್ತಿಗಾಗಿ ಲಿಂಗ ಮತ್ತು ಜ್ಞಾನಕ್ಕಾಗಿ ಅರಿವಿನ ವಚನಗಳನ್ನು ಕೈಗಿಟ್ಟಿದ್ದರು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಪ್ರಾಯಪಟ್ಟರು.
ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿರುವ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರ ಮನೆಯಲ್ಲಿ ಪ್ರಾಧಿಕಾರವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜ್ಞಾನದ ಬುನಾದಿ ಮೇಲೆ ಭಕ್ತಿ ಕಟ್ಟಬೇಕು. ಈಗ ಅದಕ್ಕೆ ತದ್ವಿರುದ್ಧವಾದ ಸ್ಥಿತಿ ಇದೆ. ಇದರಿಂದಾಗಿ ಎರಡೂ ಅರ್ಥ ಕಳೆದುಕೊಳ್ಳುತ್ತಿವೆ. ಮಹನೀಯರ ಆಶಯದೊಂದಿಗೆ ಮನೆಯಲ್ಲಿ ಜ್ಞಾನದ ಬೀಜ ಬಿತ್ತಲು ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಆರಂಭಿಸಲಾಗಿದೆ. ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪನೆ ಗುರಿ ಇದೆ’ ಎಂದರು.
ಶೇಷಾದ್ರಿ ಶಶಿ ಮಾತನಾಡಿ, ‘ಪುಸ್ತಕಗಳು ಚರಿತ್ರೆಯ ವಾಹಕಗಳು. ಸಾಹಿತಿಗಳು ಕ್ರಿಯಾಶೀಲವಾಗಿದ್ದರೆ ಮಾತ್ರ ಸಮಾಜ ಚನಲಶೀಲವಾಗಿರುತ್ತದೆ. ಪ್ರಪಂಚದಲ್ಲಿ ನಡೆದಿರುವ ಎಲ್ಲಾ ಕ್ರಾಂತಿಗಳಿಗೆ ಅಲ್ಲಿನ ಚಿಂತಕರು ಮತ್ತು ಸಾಹಿತಿಗಳು ಕಾರಣ. ಸಾಹಿತ್ಯಕ್ಕೆ ಅಷ್ಟೊಂದು ಅಗಾಧವಾದ ಶಕ್ತಿ ಇದೆ’ ಎಂದು ಅಭಿಪ್ರಾಯಪಟ್ಟರು.
‘ಸಮಾಜ ಮತ್ತು ಆಡಳಿತ ವ್ಯವಸ್ಥೆ ಅಡ್ಡದಾರಿ ಹಿಡಿದಾಗಲೆಲ್ಲಾ ಎಚ್ಚರಿಸುವ ಕೆಲಸವನ್ನು ಸಾಹಿತಿಗಳು ಮಾಡುತ್ತಲೇ ಬಂದಿದ್ದಾರೆ. ಜ್ಞಾನದ ಸಂಕೇತವಾದ ಪುಸ್ತಕಗಳು ಮನೆಯಲ್ಲಿದ್ದರೆ ಅರಿವಿನ ದೀಪವಿದ್ದಂತೆ. ಈ ಅಭಿಯಾನವು ಯಶಸ್ವಿಯಾಗಿ ಮನೆ–ಮನಗಳನ್ನು ತಲುಪಲಿ’ ಎಂದು ಶುಭ ಕೋರಿದರು.
ಸಾಹಿತಿ ಆಸಿಫ್ ಶರೀಪ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು, ಮುಸ್ಲಿಂ ಪದವೀಧರರ ವೇದಿಕೆಯ ನಯಾಜ್ ಅಹಮದ್, ನಗರಸಭೆ ಅಧಿಕಾರಿ ನಟರಾಜೇಗೌಡ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಶೇಷಾದ್ರಿ ಮತ್ತು ಪ್ರತಿಮಾ ದಂಪತಿಯನ್ನು ಪ್ರಾಧಿಕಾರದಿಂದ ಸನ್ಮಾನಿಸಲಾಯಿತು.
ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಅಧ್ಯಕ್ಷೆ ಕವಿತಾ ರಾವ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಶ್ರೀನಿವಾಸ್ ಕರಿಯಪ್ಪ ಸ್ವಾಗತ, ಕೆ. ನಾಗೇಂದ್ರ ನಿರೂಪಣೆ ಹಾಗೂ ಪದ್ಮರೇಖಾ ಎಸ್. ವಂದನಾರ್ಪಣೆ ಮಾಡಿದರು. ಸಮಿತಿ ಸದಸ್ಯ ರುದ್ರೇಶ್ವರ, ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಪ್ರವೀಣ್, ಸ್ವಾಭಿಮಾನಿ ಸೇವಾ ಸಮಿತಿಯ ಗವಿಯಯ್ಯ, ಸಿದ್ದರಾಜು ಹಾಗೂ ಇತರರು ಇದ್ದರು.
ಪುಸ್ತಕ ಓದುವ ಸಂಸ್ಕೃತಿಯು ಮನೆ ಮತ್ತು ಶಾಲಾ ಹಂತದಿಂದಲೇ ಶುರುವಾಗಬೇಕು. ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನೇ ಉಡುಗೊರೆಯಾಗಿ ಕೊಡಬೇಕು. ಇದರಿಂದ ಸಾಹಿತಿಗಳು ಹಾಗೂ ಪುಸ್ತಕೋದ್ಯಮವನ್ನು ಪ್ರೋತ್ಸಾಹಿಸಿದಂತಾಗುತ್ತದೆ– ಕೆ. ಸತೀಶ್ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಗ್ರಾಮಗಳ ಮಟ್ಟದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಗಳಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಸಣ್ಣ ಗ್ರಂಥಾಲಯ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುವುದು– ಪಿ. ನಾಗರಾಜ್ ನಿರ್ದೇಶಕ ಬೆಂಗಳೂರು ಸಹಕಾರ ಹಾಲು ಒಕ್ಕೂಟ
‘ಪ್ರಮುಖ ಸಾಹಿತಿಗಳ ಊರಿನಲ್ಲಿ ಅವರ ಹೆಸರಿನಲ್ಲೇ ಸಣ್ಣ ಗ್ರಂಥಾಲಯ ತೆರೆದು ಜ್ಞಾನ ಹಂಚುವ ಕೆಲಸವನ್ನು ಪ್ರಾಧಿಕಾರ ಮಾಡಬೇಕು. ಜನ ನಿತ್ಯ ಭೇಟಿ ಮಾಡಲು ಬರುವಂತಹ ಜನಪ್ರತಿನಿಧಿಗಳ ಮನೆಯಲ್ಲೂ ಗ್ರಂಥಾಲಯ ಇರಬೇಕು. ಭೇಟಿಗಾಗಿ ತಾಸುಗಟ್ಟಲೆ ಕಾಯುವ ಜನ ಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ತಿರುವು ಹಾಕುತ್ತಾರೆ’ ಎಂದು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದರು. ‘ಪ್ರಾಧಿಕಾರದ ಅಧ್ಯಕ್ಷರು ಕಚೇರಿಗೆ ಸೀಮಿತವಾಗಿಲ್ಲ ಎಂಬುದಕ್ಕೆ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಸಾಕ್ಷಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಓದುವ ಸಂಸೃತಿ ಪಸರಿಸುವ ಕಾರ್ಯಕ್ರಮ’ ‘ಸಾಮಾಜಿಕ ಮಾಧ್ಯಮಗಳು ಇಂದು ವಿಜೃಂಭಿಸುತ್ತಿವೆ. ನೋಡುವ ಮತ್ತು ಕೇಳುವ ಭರದಲ್ಲಿ ಕ್ಷೀಣಿಸುತ್ತಿರುವ ಓದುವ ಸಂಸ್ಕೃತಿ ಪಸರಿಸುವಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಮಹತ್ವದ್ದಾಗಿದೆ. ಪುಸ್ತಕಗಳು ನಮ್ಮ ಅರಿವು ವಿಸ್ತರಿಸುತ್ತವೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಇತ್ತೀಚಿಗೆ ಪುಸ್ತಕ ಸಂತೆ ಪರಿಕಲ್ಪನೆ ಶುರುವಾಗಿದ್ದು ಯುವಜನರು ಹೆಚ್ಚಾಗಿ ಪಾಲ್ಗೊಂಡು ಪುಸ್ತಕಗಳನ್ನು ಖರೀದಿಸುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಲೇಖಕಿ ಡಾ. ಎಚ್.ಎಲ್. ಪುಷ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.