ADVERTISEMENT

ಕಾನೂನು ಬಾಹಿರ ಪಾವತಿ: ಬಿಡದಿ ಪುರಸಭೆ ಮುಖ್ಯಾಧಿಕಾರಿ, ಸದಸ್ಯನ ವಿರುದ್ಧ ತನಿಖೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 19:09 IST
Last Updated 11 ಜನವರಿ 2026, 19:09 IST
ಬಿಡದಿ ಪುರಸಭೆ ಕಚೇರಿ
ಬಿಡದಿ ಪುರಸಭೆ ಕಚೇರಿ   

ಬಿಡದಿ (ರಾಮನಗರ): ಪಟ್ಟಣದ ಪುರಸಭೆಯ ನೌಕರರ ವೇತನ ವ್ಯತ್ಯಾಸದ ಬಾಕಿ ಮೊತ್ತ ₹1.89 ಕೋಟಿಯನ್ನು ಕಾನೂನುಬಾಹಿರವಾಗಿ ಪಾವತಿಸಿ ಅದಕ್ಕಾಗಿ ನೌಕರರಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ಎಂ. ಮತ್ತು ವಾರ್ಡ್–13ರ ಕಾಂಗ್ರೆಸ್ ಸದಸ್ಯ ಉಮೇಶ್ ವಿರುದ್ಧ ತನಿಖೆಗೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ-4 ಡಾ. ನಾಗೇಂದ್ರ ಪ್ರಸಾದ್ ಹೊನ್ನಳ್ಳಿ, ಅಧೀನ ಕಾರ್ಯದರ್ಶಿ ಲತಾ .ಕೆ ಮತ್ತು ಪೌರಾಡಳಿತ ನಿರ್ದೇಶನಾಲಯದ ಕೇಂದ್ರ ಸ್ಥಾನಿಕ ಸಹಾಯಕ ಅಮೀತ್ ತರದಾಳೆ ಅವರನ್ನು ಒಳಗೊಂಡ ತನಿಖಾ ತಂಡವನ್ನು ಇಲಾಖೆ ಇತ್ತೀಚೆಗೆ ರಚಿಸಿದೆ.

ತಂಡವು ಬಿಡದಿ ಪುರಸಭೆಗೆ ಭೇಟಿ ನೀಡಿ, ನಿಯಮಾನುಸಾರ ಪರಿಶೀಲಿಸಿ 15 ದಿನಗಳ ಒಳಗಾಗಿ ದಾಖಲೆಗಳೊಂದಿಗೆ ತನಿಖಾ ವರದಿ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ADVERTISEMENT

ದೂರು ಏನು?: ಕಾರ್ಮಿಕ ಇಲಾಖೆಯ ಆದೇಶದ ಮೇರೆಗೆ ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ಅವರು, 2024ರ ಫೆ. 6ರ ಕಾರ್ಮಿಕ ನ್ಯಾಯಾಲಯದಲ್ಲಿನ ಪಟ್ಟಿಯಲ್ಲಿನ 71 ನೌಕರರ ಬದಲಿಗೆ, ಸದರಿ ಪಟ್ಟಿಯಲ್ಲಿ ಹೆಸರಿಲ್ಲದ ಮೂವರು ನೌಕರರು ಸೇರಿದಂತೆ ಒಟ್ಟು 23 ಮಂದಿಗೆ ₹1,89,77,786 ಮೊತ್ತ ಪಾವತಿಸಿದ್ದಾರೆ. ಆ ಮೂಲಕ, ಪುರಸಭೆ ಸ್ವಂತ ನಿಧಿಯ ಹಣವನ್ನು ಕಾನೂನುಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ.

ಬಿಡುಗಡೆಯಾದ ಹಣದಲ್ಲಿ ಮುಖ್ಯಾಧಿಕಾರಿ ಮತ್ತು ಸದಸ್ಯ ಉಮೇಶ್‌ಗೆ ಶೇ 15ರಷ್ಟು ಹಣ ನೀಡಬೇಕು. ಇಲ್ಲವಾದರೆ ಹಣ ಬಿಡುಗಡೆ ವಿಳಂಬವಾಗುತ್ತದೆ ಎಂದು ಬಿಡದಿ ಪುರಸಭೆ ನೌಕರ ಶಿವಕುಮಾರ್ ಮತ್ತು ಇನ್ನೊಬ್ಬ ನೌಕರ ಸುರೇಶ್ ಅವರ ಪತ್ನಿ ನಡೆಸಿದ ಮೊಬೈಲ್‌ ಪೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ನಂತರ ಈ ಸಂಬಂಧ ನೀರುಗಂಟಿಗಳು ಸಹ ಸುದ್ದಿಗೋಷ್ಠಿ ನಡೆಸಿದ್ದಾರೆ.

ಕೋರ್ಟ್ ಆದೇಶದಂತೆ ಮುಖ್ಯಾಧಿಕಾರಿ ₹71,61,891 ಮೊತ್ತವನ್ನು ಕೋರ್ಟ್‌ನಲ್ಲಿ ಠೇವಣಿ ಇಟ್ಟು ನ್ಯಾಯಾಲಯದಿಂದಲೇ 71 ನೌಕರರಿಗೆ ಪಾವತಿಸಲು ಆದೇಶ ಪಡೆದು ಪಾವತಿಸಬೇಕಾಗಿತ್ತು. ಅಲ್ಲದೆ, ಕೋರ್ಟ್ ಆದೇಶದಲ್ಲಿ 2018–19 ಮತ್ತು 2020–21ನೇ ಸಾಲಿಗೆ ಸಂಬಂಧಪಟ್ಟಂತೆ ಮಾತ್ರ ಪ್ರಸ್ತಾಪಿಸಲಾಗಿದೆ.

ನೌಕರರ ಮನವಿಯಂತೆ 2015ನೇ ಸಾಲಿನಿಂದಲೂ ವೇತನ ವ್ಯತ್ಯಾಸದ ಹಣ ಪಾವತಿಸುವ ಕುರಿತು ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಿತ್ತು. ಅಲ್ಲಿಂದ ಸ್ಪಷ್ಟ ಆದೇಶ ಪಡೆದು ನಿಯಮಾನುಸಾರ 71 ನೌಕರರರಿಗೆ ಮೊತ್ತ ಪಾವತಿಸಬೇಕಾಗಿತ್ತು.

ಆದರೆ, ಮುಖ್ಯಾಧಿಕಾರಿ ಅದರಂತೆ ಕ್ರಮ ಕೈಗೊಂಡಿಲ್ಲ. ಸದಸ್ಯ ಉಮೇಶ್ ಜೊತೆ ಶಾಮೀಲಾಗಿ ನೌಕರರಿಂದ ಶೇ 15ರಷ್ಟು ಹಣ ವಸೂಲಿ ಮಾಡಿ, ಪುರಸಭೆಯ ಸ್ವಂತ ನಿಧಿಯಿಂದ ₹1.89 ಕೋಟಿ ಮೊತ್ತವನ್ನು ಕಾನೂನುಬಾಹಿರವಾಗಿ 23 ನೌಕರರಿಗೆ ಪಾವತಿಸಿದ್ದಾರೆ.

ಇಷ್ಟು ಮೊತ್ತ ದುರ್ಬಳಕೆ ಮಾಡಿಕೊಂಡಿರುವ ಮುಖ್ಯಾಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಅಮಾನತುಗೊಳಿಸಬೇಕು. ಅಧಿಕಾರಿ ಜೊತೆ ಶಾಮೀಲಾಗಿರುವ ಸದಸ್ಯ ಉಮೇಶ್ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಮತ್ತು ಸದಸ್ಯರು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದ ದೂರಿನಲ್ಲಿ ಒತ್ತಾಯಿಸಿದ್ದರು.

ಆರೋಪ–ಪ್ರತ್ಯಾರೋಪ; ಸೇವೆಯಿಂದ ವಜಾ

ಜೆಡಿಎಸ್ ಅಧಿಕಾದಲ್ಲಿರುವ ಪುರಸಭೆಯಲ್ಲಿ ನೌಕರರ ವೇತನ ವ್ಯತ್ಯಾಸದ ಮೊತ್ತ ಪಾವತಿ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರು ಆಡಳಿತಾರೂಢ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಸಹ ಮುಖ್ಯಾಧಿಕಾರಿ ಮೀನಾಕ್ಷಿ ಮತ್ತು ಕೈ ಸದಸ್ಯ ಉಮೇಶರ್ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಕಿಕ್‌ಬ್ಯಾಕ್ ಆರೋಪ ಮಾಡಿದ್ದರು. ಇದು ಪರಸ್ಪರ ಆರೋಪ– ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ನೌಕರರ ಒಂದು ಗುಂಪು ಲಂಚದ ವಿರುದ್ಧ ಮತ್ತೊಂದು ಗುಂಪು ಉಮೇಶ್ ಪರವಾಗಿ ಸುದ್ದಿಗೋಷ್ಠಿ ನಡೆಸಿತ್ತು. ಅದರ ಬೆನ್ನಲ್ಲೇ ಹಣ ಬಿಡುಗಡೆ ಮಾಡಿಸಲು ಹಲವರಿಗೆ ಹಣ ಕೊಟ್ಟಿದ್ದೇನೆ ಎಂದಿದ್ದ ವಾಟರ್‌ಮ್ಯಾನ್ ಶಿವಕುಮಾರ್ ಅವರನ್ನು ಸೇವೆಯಿಂದ ತೆಗೆದು ಹಾಕಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.