
ರಾಮನಗರ: ‘ಧ್ಯಾನಕ್ಕೆ ಕುಳಿತಿರುವ ನಮ್ಮ ಗುರುಗಳು ಇನ್ನೂ ಎದ್ದಿಲ್ಲ. ಅವರು ಎದ್ದ ಬಳಿಕ ನಮ್ಮ ನಾಯಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದಕ್ಕೆ ಮೂರನೇಯ ಅಂತಿಮ ದಿನಾಂಕ ಕೊಡುತ್ತಾರೆ. ಆ ದಿನಾಂಕದೊಳಗೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸದಿದ್ದರೆ ನಮಗೆ ರಾಜಕಾರಣವೇ ಬೇಡ’ ಎಂದು ಡಿಸಿಎಂ ಆಪ್ತ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮಲ್ಲಿ ಯಾವುದೇ ಬಣವಿಲ್ಲ. ಪಕ್ಷದ 140 ಶಾಸಕರೂ ಡಿಕೆಶಿ ಬಣವಾಗಿದ್ದು, ಎಲ್ಲರೂ ಅವರ ಪರವಾಗಿದ್ದೇವೆ. ನಾಯಕತ್ವ ಬದಲಾವಣೆ ಮಾಡುವಂತೆ ಒಕ್ಕೊರಲಿನಿಂದ ಹೈಕಮಾಂಡ್‌ಗೆ ಕೇಳಿದ್ದೇವೆ’ ಎಂದರು.
‘ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಜನ್ಮದಿನದ ಪ್ರಯುಕ್ತ ಶಾಸಕರು ಒಂದೆಡೆ ಭೋಜನಕ್ಕೆ ಸೇರಿದ್ದರು. ರಂಜಾನ್ ಹಬ್ಬದ ಪ್ರಯುಕ್ತ ಕ್ಷೇತ್ರದಲ್ಲಿ ನಾನು ರಂಜಾನ್ ಕಿಟ್ ವಿತರಿಸುತ್ತಿದ್ದೆ. ಹಾಗಾಗಿ, ನಾನು ಭೋಜನಕ್ಕೆ ಹೋಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನಾಯಕತ್ವ ಗೊಂದಲ ಮುಂದುವರೆದರೆ ಮುಂದೆ ಪಕ್ಷ ಅಧಿಕಾರಕ್ಕೆ ಬರಲ್ಲ’ ಎಂಬ ಶಾಸಕ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಅವರ ವೈಯಕ್ತಿಕ ಅಭಿಪ್ರಾಯ. ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು ಎಲ್ಲಾ ಜನರನ್ನು ತಲುಪಿವೆ. ಪಕ್ಷ ಮುಂದೆ ಅಧಿಕಾರಕ್ಕೆ ಬರಲು ಪಕ್ಷಕ್ಕೆ ಮತ್ತಷ್ಟು ಸಂಘಟನೆಯ ಶಕ್ತಿ ಬೇಕು. ಅದಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.