ADVERTISEMENT

ಡಿಕೆಶಿ ಎದುರು ನಿಲ್ಲುವವರು ಯಾರು? ಜೆಡಿಎಸ್–ಬಿಜೆಪಿ ಅಭ್ಯರ್ಥಿಗಳ ಹುಡುಕಾಟ

ಆರ್.ಜಿತೇಂದ್ರ
Published 2 ಜೂನ್ 2022, 5:25 IST
Last Updated 2 ಜೂನ್ 2022, 5:25 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಬಲ್ಲ ಸಾರಥಿಗಳು ಇನ್ನೂ ಸಿಕ್ಕಿಲ್ಲ. ಚುನಾವಣೆಗೆ ಇನ್ನೊಂದೇ ವರ್ಷವಿದ್ದರೂ ಪ್ರತಿ ಪಕ್ಷಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದು, ಕಾರ್ಯಕರ್ತರೂ ಉತ್ಸಾಹ ಕಳೆದುಕೊಂಡಿದ್ದಾರೆ.

ಈ ಹಿಂದೆ ಸಾತನೂರು ವಿಧಾನಸಭಾ ಕ್ಷೇತ್ರ ಅಸ್ತಿತ್ವದಲ್ಲಿ ಇದ್ದ ಕಾಲದಿಂದಲೂ ಡಿ.ಕೆ. ಶಿವಕುಮಾರ್ ಶಾಸಕರಾಗಿ ಆಯ್ಕೆಯಾಗುತ್ತಬಂದಿದ್ದು, ಸತತ ಏಳು ಬಾರಿ ಗೆಲುವು ಕಂಡಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಡಿಕೆಶಿ ಮತ್ತೆ ತಿರುಗಿ ನೋಡಿದ್ದಿಲ್ಲ. 2008ರಲ್ಲಿ ಸಾತನೂರು ಕ್ಷೇತ್ರ ರದ್ದಾಗಿ ಕನಕಪುರ ಕ್ಷೇತ್ರಕ್ಕೆ ಬಂದ ಬಳಿಕವೂ ಶಿವಕುಮಾರ್ ಗೆಲುವಿನ ಓಟ ಮುಂದುವರಿದೇ ಇದೆ. 2018ರ ಚುನಾವಣೆಯಲ್ಲಿ ಬರೋಬ್ಬರಿ 79,909 ಮತಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿರುವುದು ಕ್ಷೇತ್ರದಲ್ಲಿ ಅವರ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.

ಡಿ.ಕೆ. ಶಿವಕುಮಾರ್ ಎದುರು ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುವುದಾಗಿ ಜೆಡಿಎಸ್ ಹೇಳುತ್ತಿದ್ದರೂ ಇನ್ನೂ ಅಭ್ಯರ್ಥಿ ಯಾರೆಂದು ನಿರ್ಧರಿಸಿಲ್ಲ. ಕ್ಷೇತ್ರದ ಬಗ್ಗೆ ಜೆಡಿಎಸ್ ವರಿಷ್ಠರ ನಿರ್ಲಕ್ಷ್ಯ ಖಂಡಿಸಿ ಕನಕಪುರದ ಕಾರ್ಯಕರ್ತರು ಈಚೆಗೆ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಅವರ ನಿವಾಸದಲ್ಲೇ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಕನಕಪುರದಲ್ಲೇ ಸಭೆ ಕರೆದು ಈ ಬಗ್ಗೆ ನಿರ್ಧರಿಸುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದ್ದರು. ಅದಾದ ಬಳಿಕವೂ ಯಾವುದೇ ಬೆಳವಣಿಗೆ ನಡೆದಿಲ್ಲ.

ADVERTISEMENT

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಆಗಿದ್ದ ನಾರಾಯಣ ಗೌಡ ಚುನಾವಣೆ ಬಳಿಕ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿಲ್ಲ.ಅವರಿಗೂ ಮುನ್ನ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದ ಡಿ.ಎಂ. ವಿಶ್ವನಾಥ್‌ ಸಹ ಸಕ್ರಿಯರಾಗಿಲ್ಲ. ಹೀಗಾಗಿ ಜೆಡಿಎಸ್ ಕನಕಪುರದಲ್ಲಿ ನಾಯಕತ್ವದ ಕೊರತೆ ಎದುರಿಸುತ್ತಿದ್ದು, ಪಕ್ಷವನ್ನು ಮುನ್ನಡೆಸುವವರಿಗಾಗಿ ಕಾರ್ಯಕರ್ತರು ಕಾಯತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.