ಬಂಧನ
ಕನಕಪುರ: ಬೆಂಗಳೂರಿನ ರೌಡಿಶೀಟರ್ ಹೆಮ್ಮಿಗೆಪುರದ ಚಿರಂಜೀವಿಯನ್ನು ಕೊಲೆ ಪ್ರಕರಣವನ್ನು ಭೇದಿಸಿರುವ ತಾಲ್ಲೂಕಿನ ಗ್ರಾಮಾಂತರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕೊಲೆ ನಡೆದು 24 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದಂತಾಗಿದೆ.
ದೊಡ್ಡ ಕಲ್ಬಾಳ್ ರವಿ (35), ಹೆಬ್ಬಿದಿರು ಮೆಟ್ಟಿಲು ಪ್ರಜ್ವಲ್ (23) ಮತ್ತು ಪವನ್ (24) ಬಂಧಿತರು.
ಈ ಮೂವರು ಕ್ಷುಲ್ಲಕ ಕಾರಣಕ್ಕೆ ಮಂಗಳವಾರ ರಾತ್ರಿ ಭದ್ರೆಗೌಡನದೊಡ್ಡಿ ಗ್ರಾಮದ ಕೆರೆ ಬಳಿ ರೌಡಿಶೀಟರ್ ಚಿರಂಜೀವಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ಕೊಲೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದ ಚಿರಂಜೀವಿ ಮೂರು ತಿಂಗಳ ಹಿಂದಷ್ಟೇ ಜಾಮೀನು ಪಡೆದು ಭದ್ರೆಗೌಡನದೊಡ್ಡಿ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದ. ಆರೋಪಿಗಳು ಮತ್ತು ಚಿರಂಜೀವಿ ಮಧ್ಯೆ ಗಲಾಟೆಯಾಗಿ, ಹೊಡೆದಾಡಿಕೊಂಡಿದ್ದರು. ಆ ಬಳಿಕ ರಾಜೀ ಮಾಡಿಕೊಂಡಿದ್ದರು.
ಆರೋಪಿ ಪವನ್ ಅವರ ತಂದೆಗೆ ಕಕ್ಕಾಬಿಕ್ಕಿ ಎಂದು ಅಡ್ಡ ಹೆಸರಿದ್ದು, ಚಿರಂಜೀವಿ ಆಗಾಗ ಪವನ್‌ನನ್ನು ಕಕ್ಕಾಬಿಕ್ಕಿ ಎಂದು ರೇಗಿಸುತ್ತಿದ್ದ. ಇದರಿಂದ ಕ್ರೋಧಗೊಂಡಿದ್ದ ಪವನ್ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಮಂಗಳವಾರ ರಾತ್ರಿ 10.30ರ ಸಮಯದಲ್ಲಿ ರೌಡಿಶೀಟರ್ ಚಿರಂಜೀವಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದ.
ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್‌ಪಿ ಶ್ರೀನಿವಾಸ್ ಗೌಡ, ಡಿವೈಎಸ್‌ಪಿ ರಾಮಚಂದ್ರಯ್ಯ, ಇನ್‌ಸ್ಪೆಕ್ಟರ್ ವಿಕಾಸ್, ಪಿಎಸ್ಐ ಆಕಾಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.