
ರಾಮನಗರ: ‘ಹೆಣ್ಣು ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ನ. 25ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಅಸ್ಮಿತಾ ಲೀಗ್ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 14 ಮತ್ತು 16 ವರ್ಷದೊಳಗಿನ ಬಾಲಕಿಯರಿಗಾಗಿ ನಡೆಯುವ ಲೀಗ್‌ಗೆ ನಗರಸಭೆ ಅಗತ್ಯ ಸಹಕಾರ ನೀಡಲಿದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.
‘ಭಾರತೀಯ ಕ್ರೀಡಾ ಪ್ರಾಧಿಕಾರ, ಯುವಜನ ಮತ್ತು ಕ್ರೀಡಾ ಸಚಿವಾಲಯ ಹಾಗೂ ಇಂಡಿಯನ್ ಅಥ್ಲೆಟಿಕ್ಸ್ ಸಂಸ್ಥೆಗಳ ಸಹಯೋಗದಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮದಡಿ ನಡೆಯುವ ಲೀಗ್ ಯಶಸ್ಸಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ನಗರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅಸೋಸಿಯೇಷನ್ ಕಾರ್ಯದರ್ಶಿ ಉಮೇಶ್ ಬಾಬು ಮಾತನಾಡಿ, ‘ಲೀಗ್‌ನಲ್ಲಿ ಭಾಗವಹಿಸುವ 14 ವರ್ಷದೊಳಗಿನ ಬಾಲಕಿಯರು 2011 ಡಿ. 12ರಿಂದ 2023 ಡಿ. 20ರೊಳಗೆ ಜನಿಸಿರಬೇಕು. 16 ವರ್ಷದೊಳಗಿನ ಬಾಲಕಿಯರು 2009 ಡಿ. 21ರಿಂದ 2011 ಡಿ. 20ರೊಳಗೆ ಹುಟ್ಟಿರಬೇಕು. ಸ್ಪರ್ಧೆಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲು ಅಂತರರಾಷ್ಟ್ರೀಯ ಕ್ರೀಡಾಪಟು ನೀರಜಾ ಚೌಧರಿ ಅವರ ತರಬೇತುದಾರರಾದ ಕಾಶಿನಾಥ್ ನಾಯಕ್ ಮತ್ತು ಸತೀಶ್ ತಂಗವೇಲ್ ಹಾಜರಿರಲಿದ್ದಾರೆ’ ಎಂದು ತಿಳಿಸಿದರು.
ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನವನ್ನು ಕಟ್ಟಿಕೊಳ್ಳಬಹುದು. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಶೇ 3ರಷ್ಟನ್ನು ಕ್ರೀಡಾಪಟುಗಳಿಗೆ ಮೀಸಲಿಟ್ಟಿದೆ. ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಪೊಲೀಸ್ ಇಲಾಖೆಯಲ್ಲಿಯೂ ಉದ್ಯೋಗ ಪಡೆಯಲು ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಜಿಲ್ಲೆಯ ಬಾಲಕಿಯರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
‘ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತರು ನ. 23ರೊಳಗೆ ತಮ್ಮ ಹೆಸರುಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ಸೃಜಿಸಿರುವ ಎನ್ಎಸ್‌ಆರ್‌ಎಸ್ ಪೋರ್ಟಲ್‌ನ ಖೇಲೋ ಇಂಡಿಯಾ ಅಸ್ಮಿತಾ ಲೀಗ್ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸ್ಪರ್ಧಿಗಳು ಆಯಾ ತಾಲ್ಲೂಕಿನ ಶಿಕ್ಷಣ ಲಾಖೆಯಲ್ಲಿರುವ ಕ್ರೀಡಾ ವಿಭಾಗದ ಸಹಕಾರ ಪಡೆದು ನೋಂದಾಯಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಪ್ರವೀಣ್, ಯಂಗ್ ಬಾಯ್ಸ್ ಸಂಸ್ಥೆಯ ವಿಜಿ, ದೇವರಾಜ್ ಹಾಗೂ ನಗರಸಭೆ ಮಾಜಿ ಸದಸ್ಯ ಶಿವಕುಮಾರ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.