
ಕುಂದಾಣ (ದೇವನಹಳ್ಳಿ): ಶಾಲಾ ಹಂತದಲ್ಲೇ ಸರ್ಕಾರಿ ಶಾಲೆ ಮಕ್ಕಳಲ್ಲಿ ಕೋಡಿಂಗ್, ಗಣಕ ತಂತ್ರಜ್ಞಾನದ ಅರಿವು ಮೂಡಿಸಿದಾಗ ಭವಿಷ್ಯ ಉಜ್ವಲಗೊಳ್ಳಲು ಸಹಕಾರಿಯಾಗಲಿದೆ ಎಂದು ಅಮೆರಿಕ ಇಂಡಿಯಾ ಫೌಂಡೇಷನ್ ಸಂಸ್ಥೆ ಯೋಜನಾ ಪ್ರತಿನಿಧಿ ಶಾಲಿನಿ ತಿಳಿಸಿದರು.
ತಾಲ್ಲೂಕಿನ ಕುಂದಾಣ ಹೋಬಳಿ ಬಚ್ಚಹಳ್ಳಿ ಸರ್ಕಾರಿ ಶಾಲೆಯಲ್ಲಿ ಈಚೆಗೆ ಅಮೆರಿಕ ಇಂಡಿಯಾ ಫೌಂಡೇಷನ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಮೆಜಾನ್ ಪ್ಯೂಚರ್ ಎಂಜಿನಿಯರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ರಾಜ್ಯದ 500 ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕೋಡಿಂಗ್ ಕಲಿಸುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ಆಧಾರಿತ ತಂತ್ರಜ್ಞಾನದ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಪ್ರಮುಖವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ವಿಜ್ಞಾನ-ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಶಾಲಾ ಮಕ್ಕಳು ತಮ್ಮ ಕೌಶಲ ಆಧಾರಿತ ಕೋಡಿಂಗ್ ಬಳಸಿ ನಾನಾ ಮಾದರಿ ಆಟೋಮೆಟಿಕ್ ವಾಟರ್ ಡಿಸ್ಪೆನ್ಸರ್, ಆಟೊಮೆಟಿಕ್ ಡೋರ್‌ಓಪನ್, ಸೆಕ್ಯೂರಿಟಿ ಅಲರಾಮ್ ಸಿಸ್ಟಂ, ಟೋಲೈಟ್, ಸ್ಟಾರ್ಚ್ ಡಸ್ ಟಿನ್ ವಸ್ತುಗಳನ್ನು ಪ್ರದರ್ಶಿಸಿದರು. ಕಲಿಕೆ ಅನುಭವ, ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ ಗಮನ ಸೆಳೆಯಿತು.
ಶಾಲೆ ಮುಖ್ಯ ಶಿಕ್ಷಕ ಮೋಹನ್ ರಾವ್, ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್, ಸಹ ಶಿಕ್ಷಕರಾದ ನಾಗರಾಜು, ಕೃಷ್ಣಮೂರ್ತಿ, ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.