ADVERTISEMENT

ಲಾಕ್‌ಡೌನ್‌: ಆಸ್ತಿ ತೆರಿಗೆ ಸಂಗ್ರಹ ಕುಸಿತ

ರಾಮನಗರ ನಗರಸಭೆಗೆ ಏಪ್ರಿಲ್‌ನಲ್ಲಿ ಕೇವಲ ₹ 12 ಲಕ್ಷ ತೆರಿಗೆ ಪಾವತಿ

ಆರ್.ಜಿತೇಂದ್ರ
Published 7 ಮೇ 2020, 10:41 IST
Last Updated 7 ಮೇ 2020, 10:41 IST
ರಾಮನಗರ ನಗರಸಭೆ ಕಾರ್ಯಾಲಯ
ರಾಮನಗರ ನಗರಸಭೆ ಕಾರ್ಯಾಲಯ   

ರಾಮನಗರ: ಕೊರೊನಾ ಲಾಕ್‌ಡೌನ್‌ ನಗರಸಭೆಯ ತೆರಿಗೆ ಸಂಗ್ರಹದ ಮೇಲೂ ಪರಿಣಾಮ ಬೀರಿದ್ದು, ಆದಾಯದಲ್ಲಿ ಭಾರಿ ಕುಸಿತ ಕಂಡಿದೆ.

ಕಳೆದ ಮಾರ್ಚ್‌ 24ರಿಂದ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಾಗಿತ್ತು. ಆಗಿನಿಂದ ಈವರೆಗೆ ನಗರಸಭೆಯ ಬೊಕ್ಕಸ ಬರಿದಾಗಿದೆ. ನಗರಸಭೆ ಸಿಬ್ಬಂದಿ, ಪೌರ ಕಾರ್ಮಿಕರು, ಸ್ವಚ್ಛತೆ ಮೊದಲಾದ ಕಾರ್ಯಗಳಿಗೂ ಹಣದ ಕೊರತೆ ಎದುರಾಗಿದೆ. ಇದರಿಂದಾಗಿ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಎಷ್ಟು ಕೊರತೆ: ಪ್ರತಿ ವರ್ಷ ಏಪ್ರಿಲ್‌ನಿಂದ ಆಯಾ ಹಣಕಾಸು ವರ್ಷದ ಆಸ್ತಿ ತೆರಿಗೆ ಸಂಗ್ರಹ ಕಾರ್ಯವು ಆರಂಭವಾಗುತ್ತದೆ. ಸಾರ್ವಜನಿಕರು ಸ್ವಯಂಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಏಪ್ರಿಲ್‌-ಮೇನಲ್ಲೇ ಅರ್ಧದಷ್ಟು ತೆರಿಗೆಯು ಸಂಗ್ರಹವಾಗುತ್ತದೆ. ನಂತರದಲ್ಲಿ ದಂಡ ಸಹಿತ ಪಾವತಿಗೆ ಅವಕಾಶ ಇರುತ್ತದೆ.

ADVERTISEMENT

2018ರ ಏಪ್ರಿಲ್‌ನಲ್ಲಿ ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವು ₹ 80 ಲಕ್ಷದಷ್ಟಿತ್ತು. 2019ರ ಏಪ್ರಿಲ್‌ನಲ್ಲಿ ಇದು ₹ 1.15 ಕೋಟಿಗೆ ಏರಿಕೆ ಆಗಿತ್ತು. ಈ ವರ್ಷ ₹ 1 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ ಈ ಅವಧಿಯಲ್ಲಿ ಕೇವಲ ₹ 12 ಲಕ್ಷ ತೆರಿಗೆ ಮಾತ್ರ ಸಂಗ್ರಹವಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ₹ 4.5 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ ಸುಮಾರು ₹ 3.5 ಕೋಟಿಯಷ್ಟೇ ವಸೂಲಾಗಿದ್ದು, ಇನ್ನೂ ₹ 1 ಕೋಟಿ ಹಾಗೆಯೇ ಉಳಿದುಕೊಂಡಿದೆ.

‘ತೆರಿಗೆ ವಸೂಲಿಗೆ ಕಳೆದ ಮಾರ್ಚ್‌‌ನಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ ಕಡೆಯ ದಿನಗಳಲ್ಲಿ ಲಾಕ್‌ಡೌನ್ ಜಾರಿಯಾದ ಕಾರಣ ಜನರಿಂದ ತೆರಿಗೆ ಸಂಗ್ರಹ
ಸಾಧ್ಯವಾಗಲಿಲ್ಲ. ಈ ವರ್ಷ ₹ 5 ಕೋಟಿ ಸಂಗ್ರಹದ ಗುರಿ ಹೊಂದಲಾಗಿದೆ. ಅದರ ಜೊತೆಗೆ ಕಳೆದ ವರ್ಷದ ₹ 1 ಕೋಟಿ ತೆರಿಗೆ ಬಾಕಿಯನ್ನೂ ವಸೂಲಿ ಮಾಡಲಾಗುವುದು’ ಎಂದು ನಗರಸಭೆ ಆಯುಕ್ತೆ ಶುಭಾ ತಿಳಿಸಿದರು.

ಶೇ 5 ವಿನಾಯಿತಿ

‘ಜನರನ್ನು ತೆರಿಗೆ ಪಾವತಿಸಲು ಪ್ರೋತ್ಸಾಹಿಸುವ ಸಲುವಾಗಿ ಈ ತಿಂಗಳು ಹಣ ಪಾವತಿಸುವವರಿಗೆ ಶೇ 5ರಷ್ಟು ವಿನಾಯಿತಿ ಘೋಷಿಸಿದ್ದೇವೆ. ಜನರು ಒಬ್ಬೊಬ್ಬರಾಗಿ ಆಸಕ್ತಿ ತೋರುತ್ತಿದ್ದಾರೆ. ಸದ್ಯ ನಮ್ಮ ಸಿಬ್ಬಂದಿ ಮುಂಜಾನೆ ದೊಡ್ಡ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳ ಮಾಲೀಕರ ಬಳಿಗೆ ತೆರಳಿ ಹಣ ಪಾವತಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ತಿಂಗಳು ಒಟ್ಟಾರೆ ತೆರಿಗೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

ಬಾಡಿಗೆಗಿಲ್ಲ ವಿನಾಯಿತಿ

ನಗರಸಭೆಯು ನಗರದ ಹೃದಯ ಭಾಗದಲ್ಲಿ ರಾಜ್‌ಕುಮಾರ್‌ ವಾಣಿಜ್ಯ ಸಂಕೀರ್ಣವನ್ನು ಹೊಂದಿದೆ. ಇಲ್ಲಿನ ಮಳಿಗೆಗಳನ್ನು ಹರಾಜು ಮೂಲಕ ವರ್ತಕರಿಗೆ ಬಾಡಿಗೆಗೆ ನೀಡಿದೆ. ಲಾಕ್‌ಡೌನ್‌ ಕಾರಣಕ್ಕೆ ಇಲ್ಲಿನ ಬಹುತೇಕ ಅಂಗಡಿಗಳು ಮುಚ್ಚಿದ್ದು, ಎರಡು ದಿನದ ಹಿಂದಷ್ಟೇ ಬಾಗಿಲು ತೆರೆದಿವೆ. ಎರಡು ತಿಂಗಳು ವ್ಯಾಪಾರ ಬಂದ್ ಅದ ಕಾರಣ ಬಾಡಿಗೆಯಲ್ಲಿ ವಿನಾಯಿತಿ ನೀಡಬೇಕು ಎನ್ನುವುದು ಇಲ್ಲಿನ ವರ್ತಕರ ಆಗ್ರಹ. ಆದರೆ ಅಂತಹ ಯಾವುದೇ ಪ್ರಸ್ತಾವ ಸದ್ಯ ನಮ್ಮ ಮುಂದೆ ಇಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

‘ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದ ಅನುದಾನ ತೀರ ಕಡಿಮೆ. ಸ್ಥಳೀಯವಾಗಿ ಸಂಗ್ರಹವಾಗುವ ತೆರಿಗೆಯಿಂದ ಎಲ್ಲವೂ ನಡೆಯಬೇಕಿದೆ. ಹೀಗಾಗಿ ಬಾಡಿಗೆ ವಿನಾಯಿತಿ ನೀಡಲು ಆಗದು. ವಾಣಿಜ್ಯ ಸಂಕೀರ್ಣದಿಂದ ಬರುವ ಬಾಡಿಗೆಯನ್ನು ಪ್ರತ್ಯೇಕ ಬ್ಯಾಂಕ್‌ ಖಾತೆಯಲ್ಲಿ ಇಡಲಾಗಿದ್ದು, ಅದನ್ನು ಕಟ್ಟಡದ ಅಭಿವೃದ್ಧಿ ಕಾರ್ಯಗಳಿಗೇ ಬಳಸಲಾಗುತ್ತದೆ. ವರ್ತಕರೂ ಸಹಕರಿಸಬೇಕು’ ಎನ್ನುತ್ತಾರೆ ಆಯುಕ್ತೆ ಶುಭಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.