
ಚನ್ನಪಟ್ಟಣ: ’ನನ್ನ ವೈದ್ಯಕೀಯ ವೃತ್ತಿಯಲ್ಲಿ ಮಾಡಿರುವ ಸೇವೆ ಗೆಲುವಿಗೆ ಸಹಕಾರಿ. ಜನರ ಸ್ಪಂದನೆ ನೋಡಿದರೆ ನನ್ನ ಗೆಲುವು ನಿಶ್ಚಿತ’ ಎಂದು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಳೂರು ಹಾಗೂ ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಪ್ರಚಾರಕ್ಕೆ ಹೋದ ಕಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ವೈದ್ಯಕೀಯ ಸೇವೆ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಜೆಡಿಎಸ್–ಬಿಜೆಪಿ ಕಾರ್ಯಕರ್ತರು, ಮುಖಂಡರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಜನರ ಅಭೂತಪೂರ್ವ ಬೆಂಬಲ ನೋಡಿ ವಿಶ್ವಾಸ ದಿನೇ ದಿನೇ ಹೆಚ್ಚಾಗುತ್ತಿದೆ. ಮಂಜುನಾಥ್ ಅಂಥವರು ಸಂಸದರಾಗಬೇಕು ಎಂದು ಜನರೇ ನಿರ್ಧಾರ ಮಾಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಮಾತನಾಡಿ, ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ85 ಮಂದಿ ಡಾ.ಮಂಜುನಾಥ್ ಪರವಾಗಿ ಇದ್ದಾರೆ. ಎಲ್ಲೆಡೆ ಜನರ ಬೆಂಬಲ ಉತ್ತಮವಾಗಿದೆ ಎಂದರು.
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಡಾ.ಮಂಜುನಾಥ್ ಅವರು ಸಂಸದರಾದರೆ ಕ್ಷೇತ್ರ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಈ ಕ್ಷೇತ್ರದಲ್ಲಿ ಯಾರನ್ನೋ ಸೋಲಿಸಬೇಕು ಎನ್ನುವ ಉದ್ದೇಶ ಇಲ್ಲ. ಮಂಜುನಾಥ್ ಅವರು ಗೆಲ್ಲಿಸಿ ವೈದ್ಯಕೀಯ ಕ್ಷೇತ್ರದ ಸೇವೆ ವಿಸ್ತಾರ ಮಾಡಬೇಕು ಎನ್ನುವುದು ಜನರ ಭಾವನೆಯಾಗಿದೆ ಎಂದರು.
ತಾಲ್ಲೂಕಿನ ಮುದುಗೆರೆ, ಮತ್ತೀಕೆರೆ ಶೆಟ್ಟಿಹಳ್ಳಿ, ಬೈರಾಪಟ್ಟಣ, ಚಕ್ಕೆರೆ, ಮಳೂರುಪಟ್ಟಣ, ಕೂಡ್ಲೂರು, ಎಸ್.ಎಂ.ದೊಡ್ಡಿ, ಎಸ್.ಎಂ.ಹಳ್ಳಿ, ಹೊಂಗನೂರು, ನೀಲಸಂದ್ರ, ಮೋಳೆದೊಡ್ಡಿ, ತಗಚಗೆರೆ, ಬ್ರಹ್ಮಣೀಪುರ, ಮುನಿಯಪ್ಪನದೊಡ್ಡಿ, ನಗರದ ಹಲವೆಡೆ ಸೇರಿದಂತೆ ಹಲವು ಕಡೆ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.